

ಹಿರಿಯೂರು :
ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಜಾತಿ ಜನಗಣತಿಯಲ್ಲಿ ಕುಂಚಿಟಿಗ ಎಂದು ನಮೂದಿಸಬೇಕು ಎಂಬುದಾಗಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಹನುಮಂತನಾಥ ಸ್ವಾಮೀಜಿ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಬಯಲುಸೀಮೆ, ಮಲೆನಾಡು, ಕರಾವಳಿ, ಕಲ್ಯಾಣಕರ್ನಾಟಕ ಸೇರಿದಂತೆ 19ಜಿಲ್ಲೆಗಳು, 47ತಾಲ್ಲೂಕುಗಳಲ್ಲಿ 30ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ತ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ, ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಯುವ ಜಾತಿಗಣತಿಯಲ್ಲಿ “ಕುಂಚಿಟಿಗ “ಎಂದು ಬರೆಯಿಸಬೇಕು ಎಂಬುದಾಗಿ ಅವರು ಹೇಳಿದರು.

ಮೈಸೂರು ಸರ್ಕಾರ 1928ರಲ್ಲಿ ಕುಂಚಿಟಿಗ ಒಂದು ಸ್ವತಂತ್ರ ಜಾತಿ ಎಂದು ಹೊರಡಿಸಿದ ಆದೇಶ, ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲವೇ ಅಲ್ಲ ಎಂಬುದಾಗಿ ಅವರು ಹೇಳಿದರು.
ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ.ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೇ ಶಿಫಾರಸ್ಸು ಮಾಡಿರುವುದರಿಂದ ಎಲ್ಲರೂ ಕುಂಚಿಟಿಗ ಎಂದು ಬರೆಯಿಸಿದರೆ, ಮುಂದೆ ಕೇಂದ್ರ ಓ.ಬಿ.ಸಿ. ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ. ಇದರಿಂದಾಗಿ ನಮ್ಮ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ ಎಂದರಲ್ಲದೆ,

ನಮ್ಮ ಸಂವಿದಾನದಲ್ಲಿ ಧರ್ಮ ಬದಲಾವಣೆಗೆ ಅವಕಾಶ ಇದೆಯೇ ವಿನಃ ಜಾತಿ ಬದಲಾವಣೆಗೆ ಅವಕಾಶ ಇಲ್ಲ. ಆದ್ದರಿಂದ ಅವರಿವರ ಮಾತು ಕೇಳಿ ತಮ್ಮ ಮೂಲ ಜಾತಿ ಬಿಟ್ಟು ಬೇರೆ ಜಾತಿ ಹೆಸರು ಬರೆಯಿಸಬೇಡಿ. ಎಲ್ಲರೂ ಕುಂಚಿಟಿಗ ಎಂದು ಬರೆಯಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂಬುದಾಗಿ ಅವರು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್, ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ, ಪ್ರಧಾನ ಕಾರ್ಯದರ್ಶಿಕೆ.ಜಿ. ಗೌಡ, ಗೌರವಾಧ್ಯಕ್ಷ ಗಡಾರಿಕೃಷ್ಣಪ್ಪ, ಮಲ್ಲಪ್ಪನಹಳ್ಳಿ ಜೋಗೇಶ್, ವಿ.ಕುಬೇರಪ್ಪ, ಕಾತ್ರಿಕೆನಹಳ್ಳಿಮಂಜುನಾಥ್, ದಿಂಡಾವರ ಚಂದ್ರಗಿರಿ, ಚಿಲ್ಲಹಳ್ಳಿನಿಜಲಿಂಗಪ್ಪ, ಆಪ್ಟಿಕಲ್ಸ್ ರಾಜೇಶ, ಕೆ.ಕೆ.ಹಟ್ಟಿ ಜಯಪ್ರಕಾಶ, ದೇವರಾಜ ಮೇಷ್ಟ್ರು, ವಕೀಲಲಕ್ಷ್ಮಣಗೌಡ, ಬಾಬುಕಾಮ್ಟೆ, ಹುಚ್ಚವ್ವನಹಳ್ಳಿಅವಿನಾಶ, ಹೊಸಯಳನಾಡುಚಂದ್ರಶೇಖರ್, ಪೆಪ್ಸಿಹನುಮಂತರಾಯ, ಕಸವನಹಳ್ಳಿ ಶ್ರೀನಾಥ್ , ಪಿಲಾಜನಹಳ್ಳಿರಾಮಸ್ವಾಮಿ, ಯು.ವಿ.ಗೌಡ, ಪ್ರೇಮಕುಮಾರ, ಶಶಿಕಲಾ, ರಮ್ಯರಾಜುಗೌಡ ಸಲಬೊಮ್ಮನಹಳ್ಳಿ, ಭಾರತಿ ವಾಣಿಮಹಾಲಿಂಗಪ್ಪ, ಕುಸುಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.