
ಹಿರಿಯೂರು :
ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ಬಿಸಿಲಿನ ಬೇಗ ಹೆಚ್ಚಿದ್ದು, ಬಹುತೇಕ ತೋಟದ ಬೆಳೆಗಳು ಬಾಡತೊಡಗಿವೆ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆಯಂತೆ ಬಾರದ ಕಾರಣ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯ ತೊಡಗಿದೆ, ಜಲಾಶಯದಿಂದ ನಾಲೆಗಳಿಗೆ ತುರ್ತಾಗಿ ನೀರು ಹರಿಸದೆ ಹೋದರೆ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗುವ ಆತಂಕ ರೈತರನ್ನು ಕಾಡುತ್ತಿದೆ ಎಂಬುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ಧರಾಮಣ್ಣ ಹೇಳಿದರು.

ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಿಶ್ವೇಶ್ವರಯ್ಯ ಜನ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಅಚ್ಚುಕಟ್ಟು ಪ್ರದೇಶದಲ್ಲಿನ ಅಡಿಕೆ, ತೆಂಗು, ಮಾವು, ದಾಳಿಂಬೆ, ಬಾಳೆ ಹಾಗೂ ಅಲ್ಪಾವಧಿ ಬೆಳೆಗಳಾದ ಶೇಂಗಾ, ರಾಗಿ, ಮುಂತಾದ ಬೆಳೆಗಳು ಒಣಗತೊಡಗಿವೆ ಆದ್ದರಿಂದ ತಡ ಮಾಡದೆ ಜಲಾಶಯದ ಎಡ ಮತ್ತು ಬಲ ನಾಲೆಗಳ ಮೂಲಕ ನೀರು ಹರಿಸುವ ಮೂಲಕ ತೋಟದ ಬೆಳೆಗಳನ್ನು ಉಳಿಸಬೇಕು ಎಂಬುದಾಗಿ ರೈತಮುಖಂಡರುಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ರಂಗಸ್ವಾಮಿ, ಬಿ.ಆರ್.ರಂಗಸ್ವಾಮಿ, ರಾಜಣ್ಣ, ಅನ್ವರ್ ಅಲಿ,ಎಂ.ತಿಮ್ಮಾರೆಡ್ಡಿ, ಸೈಯದ್ ಮೆಹಬೂಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

