
ಹಿರಿಯೂರು:
ಬಂಡವಾಳಶಾಹಿಗಳ ಮುಷ್ಠಿಯಿಂದ ರಾಜಕೀಯ ಕ್ಷೇತ್ರ ಮುಕ್ತಗೊಳಿಸಬೇಕು ಎಂಬುದಾಗಿ ಬಿ.ಬಿ.ಎಂ.ಪಿ. ನಿವೃತ್ತ ಉಪಆಯುಕ್ತರಾದ ಬೇತೂರುಪಾಳ್ಯ ಡಾ.ಜೆ.ರಾಜು ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಕ್ಕಲಿಗ ಜನಾಂಗದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಕೀಯ ಎನ್ನುವುದು ಇಂದು ಸೇವೆಯಾಗಿ ಉಳಿದಿಲ್ಲ. ಬದಲಿಗೆ ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ನೂರುಪಟ್ಟು ಗಳಿಕೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂಡವಾಳಶಾಹಿಗಳು ಆಗಮಿಸಲಿದ್ದಾರೆ ಎಂಬುದಾಗಿ ಅವರು ಹೇಳಿದರು.

ಜನಸಾಮಾನ್ಯರ ಕ್ಷೇತ್ರವನ್ನಾಗಿಸಲು ಮತದಾರರ ಸಹಕಾರ ಅತ್ಯಗತ್ಯ. ರಾಜಕೀಯದಲ್ಲಿ ಪರ-ವಿರೋಧ ಇದ್ದದ್ದೆ. ಆದರೆ, ಯಾರು ಜನರ ಸೇವೆಗೆ ಬಂದಿದ್ದಾರೆ ಎಂಬುದನ್ನು ಮತದಾರರು ಅರಿಯಬೇಕು. ಶಾಸಕ ಅಥವಾ ಸಂಸದನಾಗಲು ಕೇವಲ ಒಂದು ಜಾತಿಯಿಂದ ಸಾಧ್ಯವಿಲ್ಲ. ಎಲ್ಲಾ ಜಾತಿ- ಧರ್ಮದವರ ಪ್ರೀತಿ-ವಿಶ್ವಾಸ ಗಳಿಸಬೇಕು ಎಂದರಲ್ಲದೆ,
ಸಮಾಜಕಲ್ಯಾಣ ಇಲಾಖೆ, ಬಿ.ಬಿ.ಎಂ.ಪಿ.ಯಲ್ಲಿದ್ದಾಗ ಸಾಕಷ್ಟು ಜನರಿಗೆ ಸಹಾಯ ಮಾಡಿರುವ ತೃಪ್ತಿ ಇದೆ. ನನ್ನಲ್ಲಿಗೆ ಬಂದವರು ಕೆಲಸ ಆಗಲಿಲ್ಲ ಎಂದು ಬೇಸರಿಸಿಕೊಂಡು ಹೋದ ನಿದರ್ಶನಗಳಿಲ್ಲ. ಇದಕ್ಕೆ ನಿವೃತ್ತಿಯ ನಂತರ ನಡೆದಿರುವ ಸಭೆಗೆ ಸಾರ್ವಜನಿಕರು ಆಗಮಿಸುತ್ತಿರುವುದೇ ಸಾಕ್ಷಿ ಎಂಬುದಾಗಿ ಅವರು ಹೇಳಿದರು.
ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಬೇಕೆ, ಬೇಡವೇ ಎಂಬ ಬಗ್ಗೆ ಆಪ್ತರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ. ಇದೇ ಸಂದರ್ಭದಲ್ಲಿ ಅವರು ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡಕ್ಕೆ 20ಲಕ್ಷ ನೆರವು ನೀಡುವುದಾಗಿ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ಎರೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಟಿ.ರುದ್ರಸ್ವಾಮಿ ಅವರು ಮಾತನಾಡಿದರು.ದೊಡ್ಡಗೌಡ, ವರುಣ್ ಗೌಡ, ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ಕಾರ್ಯದರ್ಶಿಗಳಾದ ಹನುಮಂತರೆಡ್ಡಿ, ಏಕಾಂತಪ್ಪ,ನಿವೃತ್ತ ಶಿಕ್ಷಕ ಓಂಕಾರಪ್ಪ, ವಾಣಿಮಹಲಿಂಗಪ್ಪ, ಕಲ್ಪನಾ, ಹಾರ್ಡ್ ವೇರ್ ಶಿವಣ್ಣ, ಧರ್ಮಪುರಹನುಮಂತರಾಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

