
ಹಿರಿಯೂರು :
ಸೂರ್ಯನು ಧನುರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ ಉತ್ತರಾಯಣದ ಆರಂಭವಾಗಿದ್ದು, ಈ ದಿನವನ್ನು ಮಕರಸಂಕ್ರಾಂತಿ ಹಬ್ಬವೆಂದು ಆಚರಿಸಲಾಗುತ್ತಿದ್ದು, ಈ ಹಬ್ಬವನ್ನು ರೈತರು ಸುಗ್ಗಿ ಹಬ್ಬವಾಗಿ ಆಚರಿಸುವರು, ಚಳಿಗಾಲದ ಚಳಿಯನ್ನು ಕಳೆದು ಹೊಸ ಚೈತನ್ಯ ತರುವ ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಮಕರ ಸಂಕ್ರಾಂತಿ ಕರ್ನಾಟಕದ “ಸುಗ್ಗಿಹಬ್ಬ” ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಹಂಚುವುದು, ಬಣ್ಣದ ರಂಗೋಲಿ ಹಾಕುವುದು, ಕಬ್ಬು ತಿನ್ನುವುದು, ಗಾಳಿಪಟ ಹಾರಿಸುವುದು, ಹೋರಿ-ಹಸುಗಳಿಗೆ ಪೂಜೆ, ಮತ್ತು ಕಿಚ್ಚು ಹಾಯಿಸುವುದು ಪ್ರಮುಖ ಆಚರಣೆಗಳಾಗಿದ್ದು, ಇಂತಹ ಸಂಸ್ಕೃತಿ, ಸಂಪ್ರದಾಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ, ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಜಯಸುಧಾ, ಪೂಜಾ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಸುರೇಶ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸಂಕ್ರಾಂತಿ ಹಬ್ಬದ ಹಾಡುಗಳಿಗೆ ಆಕರ್ಷಕ ನೃತ್ಯಗಳನ್ನು ಮಾಡುವ ಮೂಲಕ ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

