
ಹಿರಿಯೂರು :
ಸಿಡಿಲಮರಿ ಸ್ವಾಮಿವೇಕಾನಂದರು ನಮ್ಮ ಸನಾತನ ಹಿಂದೂ ಧರ್ಮದ ಮಹತ್ವವನ್ನು ದೇಶ-ವಿದೇಶಗಳಲ್ಲಿ ಸಾರಿದ ಮಹಾನ್ ಚೇತನ, ವಿದ್ಯಾರ್ಥಿಗಳು ಇವರ ತತ್ವ ಹಾಗೂಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸ್ವಾಮಿವಿವೇಕಾನಂದರ ದೇಶಾಭಿಮಾನ, ದೇಶಭಕ್ತಿ, ಏಕಾಗ್ರತೆ, ದಿಟ್ಟತನ ಈ ಭಾರತ ದೇಶದ ಯುವಜನಾಂಗಕ್ಕೆ ಆದರ್ಶಪ್ರಾಯವಾಗಿದೆ, ವಿದ್ಯಾರ್ಥಿಗಳು ಇವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನವಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂಬುದಾಗಿ ಅವರು ಹೇಳಿದರು.
ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಸ್ವಾಮಿವಿವೇಕಾನಂದರು ತಮ್ಮ ಚಿಂತನೆಗಳ ಮೂಲಕ ವಿಶ್ವಕ್ಕೆ ಪರಿಚಯವಾದರು, ಸತತ ಯೋಗ ಹಾಗೂ ಧ್ಯಾನ ಮಾಡುವ ಮೂಲಕ ಹೆಚ್ಚಿನ ಸ್ಮರಣಶಕ್ತಿಯನ್ನು ಹೊಂದಿದ್ದರು, ಇವರ ಸ್ಮರಣಶಕ್ತಿ ಎಷ್ಟಿತ್ತೆಂದರೆ ಗ್ರಂಥಾಲಯದಲ್ಲಿ ಓದಿದ ಪ್ರತಿ ಪುಟದಲ್ಲಿರುವ ವಿಷಯವನ್ನು ಅರ್ಥವತ್ತಾಗಿ ವಿವರಿಸುತ್ತಿದ್ದರು, ಇವರ ಸಾಧನೆ ಇಂದಿನ ವಿದ್ತಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂಬುದಾಗಿ ಹೇಳಿದರು.
ಉಪನ್ಯಾಸಕರಾದ ಉಮೇಶ್ ಯಾದವ್ ಮಾತನಾಡಿ, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಘೋಷವಾಕ್ಯದ ಮೂಲಕ ಇಡೀ ಯುವಜನಾಂಗವನ್ನು ಎಚ್ಚರಗೊಳಿಸಿದ ಮಹಾನ್ ಚೇತನ ಸ್ವಾಮಿವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ ಒಂದೊಂದು ಮಾತುಗಳು ಪ್ರತಿಯೊಬ್ಬ ಭಾರತೀಯನಿಗೆ ಜಾಗೃತಿ ಗಂಟೆಯಾಗಿದ್ದು, ಹಿಂದೂ ಧರ್ಮವು ಜಗತ್ತಿನ ಎಲ್ಲಾ ಧರ್ಮಗಳಿಗೆ ಬುನಾದಿಯಾಗಿದೆ ಎಂಬುದನ್ನು ಸಮ್ಮೇಳನದಲ್ಲಿ ಸಾರಿಸಾರಿ ಹೇಳಿದ ಮಹಾನ್ ಚೇತನ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋಆರ್ಡಿ-ನೇಟರ್ ಶ್ರೀಮತಿರಚನಾ, ಶಿಕ್ಷಕಿಯರುಗಳಾದ ಶ್ರೀಮತಿ ರಜಿಯಾ, ಶ್ರೀಮತಿ ರಂಜಿತಾ, ಶ್ರೀಮತಿ ಮಮತಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಜಯಸುಧಾ, ಶ್ರೀಮತಿ ಭಾಗ್ಯ, ಪೂಜಾ, ಶಿಕ್ಷಕರಾದ ಉಮೇಶ್ ಯಾದವ್, ಸುರೇಶ್, ಸೇರಿದಂತೆ ಪ್ರೌಢಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

