March 2, 2026
000001

ಹಿರಿಯೂರು:

ತಾಲ್ಲೂಕಿನ ಓಬಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯವೇ ನಮ್ಮ ಆದ್ಯತೆ” ಎನ್ನುವ ಸರ್ಕಾರಿ ಘೋಷಣೆಗಳು ಅಕ್ಷರಶಃ ಗಾಳಿಗೆ ತೂರಲ್ಪಟ್ಟಿವೆ. ಇಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿ ಊಟದ ಗುಣಮಟ್ಟ ನೋಡಿದರೆ ಎಂತಹವರೂ ಮರುಗುವಂತಿದೆ ಎಂಬುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಶಾಲೆಯ ಅಕ್ಕಿ ಚೀಲಗಳಲ್ಲಿ ಇಲಿಗಳ ಹಿಕ್ಕೆ ಪತ್ತೆಯಾಗಿದ್ದು, ಇಲಿಗಳು ಕಚ್ಚಿದ ಮತ್ತು ಗಲೀಜು ಮಾಡಿದ ಅಕ್ಕಿಯನ್ನೇ ಮಕ್ಕಳಿಗೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಂಬಾರ್ ಮಾಡಲು ಬಳಸುವ ತೊಗರಿ ಬೇಳೆಯಲ್ಲಿ ಹುಳುಗಳು ತುಂಬಿಕೊಂಡಿದ್ದು, ಅಶುಚಿಯಾದ ವಾತಾವರಣದಲ್ಲಿ ಆಹಾರ ತಯಾರಿಸಲಾಗುತ್ತಿದೆ.

ಅಡುಗೆಗೆ ಬೇಕಾದ ಸಾಂಬಾರ್ ಪುಡಿಯನ್ನು ಅಂಗನವಾಡಿ ಇಂದ ಸಾಲವಾಗಿ ತರಲಾಗುತ್ತಿದೆ. ಇನ್ನು ತರಕಾರಿ ಪೂರೈಕೆಯಂತೂ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರು ಮತ್ತು ಪೋಷಕರಿಗೆ, ಶಾಲೆಯ ಮುಖ್ಯ ಶಿಕ್ಷಕರು ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ  ಉಡಾಫೆಯಾಗಿ ಉತ್ತರಿಸುತ್ತಾ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬುದಾಗಿ  ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು, ಕರ್ತವ್ಯ ಲೋಪ ಎಸಗಿರುವ ಮುಖ್ಯ ಶಿಕ್ಷಕರು, ಹಾಗೂ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಬೇಕು,

ಅಲ್ಲದೆ ಘಟನೆಗೆ ನೇರ ಹೊಣೆಯಾದವರ ವಿರುದ್ಧ ತಕ್ಷಣವೇ ದೂರು ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು. ಮಕ್ಕಳಿಗೆ ಪೌಷ್ಟಿಕ ಮತ್ತು ಸ್ವಚ್ಛವಾದ ಆಹಾರ ಸಿಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ಕೂಡಲೇ ಕ್ಷೇತ್ರದ ಸಚಿವರು ಈಕಡೆ ಗಮನ ಹರಿಸಬೇಕು ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಮಕ್ಕಳ ಪೋಷಕರು ಎಚ್ಚರಿಸಿದ್ದಾರೆ.

ವರದಿ: ಪವರ್ ಫೋಕಸ್ ಅರ್ಜುನ್ ಬ್ಯಾಡರಹಳ್ಳಿ

About The Author

Leave a Reply

Your email address will not be published. Required fields are marked *