March 2, 2026
00002

ಹಿರಿಯೂರು:

ಬಯಲುಸೀಮೆಯ ಜನರ ಹಲವು ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭಗೊಂಡು 20 ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣದಿರುವ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಚ್ಚರಿಸಲು ಜಿಲ್ಲೆಯಾದ್ಯಂತ ಈ ತಿಂಗಳ ಕೊನೆಯ ವಾರದಲ್ಲಿ ಹೋರಾಟ  ಆರಂಭಿಸಲಾಗುವುದು ಎಂಬುದಾಗಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.

ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶುಕ್ರವಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜಿಲ್ಲಾ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಎರಡು ವರ್ಷದ ಹಿಂದೆ ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5300 ಕೋಟಿ ಅನುದಾನ ನೀಡುವ ಭರವಸೆಯನ್ನು ಇಂದಿಗೂ ಬಿಡುಗಡೆ ಮಾಡಿಲ್ಲ. ಪದೇಪದೇ ಕೇಂದ್ರದ ಕಡೆ ಬೊಟ್ಟು ಮಾಡುವ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದ ಕಾರಣಕ್ಕೆ ಯೋಜನೆಯ ವೆಚ್ಚ ದಿನೇ ದಿನೇ ಹೆಚ್ಚುತ್ತಿದ್ದರೆ, ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಬಯಲುಸೀಮೆಯ ರೈತರಲ್ಲಿನ ಆತಂಕವೂ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕನಿಷ್ಟ 5000 ಕೋಟಿ ಅನುದಾನ ಮೀಸಲಿಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ 5300 ಕೋಟಿ ಹಣವನ್ನು ತಡಮಾಡದೆ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಮಣ್ಣಿನ ಕೆರೆಗಳಿಗೆ ಭದ್ರ ಯೋಜನೆ ಮೂಲಕ ನೀರು ತುಂಬಿಸಬೇಕು. ಯೋಜನೆ ಆಮೆಗತಿಯಲ್ಲಿ ಸಾಗಲು ಕಾಮಗಾರಿಯಲ್ಲಿನ ಭಾರೀ ಭ್ರಷ್ಟಾಚಾರವೂ ಕಾರಣವಾಗಿದೆ,

ಈ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈ ನಮ್ಮ ಬೇಡಿಕೆಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ನಡೆಸುವುದು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು. ಸರ್ಕಾರ ನಮಗೆ ಖಚಿತ ಭರವಸೆ ನೀಡದೇ ಹೋದರೆ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳುವುದು. ಹಾಗೆಯೇ ಕೇಂದ್ರದ ವಿರುದ್ಧ ಫೆಬ್ರವರಿ ಮೊದಲ ವಾರದಲ್ಲಿ ದೆಹಲಿಯ ಜಂಥರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಭೆಯಲ್ಲಿ ರೈತ ಮುಖಂಡರು ಸ್ಪಷ್ಟಪಡಿಸಿದರು.

ಈ ಸಭೆಯಲ್ಲಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟಸಿದ್ದವೀರಪ್ಪ, ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಮುಖಂಡರಾದ ತಿಪ್ಪೀರಣ್ಣ, ಜಿ.ಪಿ.ಯಶವಂತರಾಜು, ಅರಳೀಕೆರೆ ತಿಪ್ಪೇಸ್ವಾಮಿ, ಎಂ.ಆರ್. ವೀರಣ್ಣ, ಈರಣ್ಣ, ವದ್ದೀಕೆರೆ ಕಾಂತರಾಜು, ಕಲ್ಲಟ್ಟಿ ಪಾತಣ್ಣ, ತಿಮ್ಮಾರೆಡ್ಡಿ, ಸಣ್ಣತಿಮ್ಮಣ್ಣ, ಎಚ್.ಟಿ. ಚಂದ್ರಶೇಖರ್, ನಂದಿಹಳ್ಳಿ ರಂಗಸ್ವಾಮಿ, ಜಯಣ್ಣ, ಜಗನ್ನಾಥ್, ವಿರುಪಾಕ್ಷ, ನಿಂಗಪ್ಪ, ಬಿ.ಆರ್. ರಂಗಸ್ವಾಮಿ, ಶಿವಣ್ಣ, ಬಾಲಕೃಷ್ಣ, ರಾಮಕೃಷ್ಣ ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *