
ಹಿರಿಯೂರು:
ಈ ದೇಶದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಶಿಕ್ಷಣದ ಕ್ರಾಂತಿಯನ್ನು ಮಾಡಿದಂತಹ ಮಹಾನ್ ಸಾಧಕರಲ್ಲಿ ಫಾತಿಮಾ ಶೇಖ್ ರವರು ಒಬ್ಬರಾಗಿದ್ದಾರೆ, ಜ್ಯೋತಿಬಾಪುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ದಂಪತಿಗಳಿಗೆ ಆಶ್ರಯ ನೀಡಿದ ಫಾತಿಮಾ ಶೇಖ್ ರವರ ಜಯಂತಿಯನ್ನು ಈ ದಿನ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂಬುದಾಗಿ ನಗರಸಭೆಯ ಪೌರಯುಕ್ತರಾದ ವಾಸಿಂ ಅವರು ಹೇಳಿದರು.
ನಗರದ ಕರ್ನಾಟಕ ಕಂಪ್ಯೂಟರ್ ಸೆಂಟರ್ ನಲ್ಲಿ ತಾಲ್ಲೂಕು ಮಾನವ ಬಂಧುತ್ವ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಫಾತಿಮಾ ಶೇಖ್ ರವರ ಜಯಂತಿ ಕಾರ್ಯಕ್ರಮದಲ್ಲಿ ಫಾತಿಮಾ ಶೇಖ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ನಂತರ ಅವರು ಮಾತನಾಡಿದರು.
ಇಂದು ಭಾರತ ದೇಶದ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ, ಗ್ರಾಮಪಂಚಾಯಿತಿ ಅಧ್ಯಕ್ಷರಿಂದ ಹಿಡಿದು ದೇಶದ ರಾಷ್ಟ್ರಪತಿಯವರಿಗೂ ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರತಿಯೊಂದು ರಂಗದಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ ಎಂಬುದಾಗಿ ಅವರು ಹೇಳಿದರು.
ದಲಿತಪರ ಸಂಘಟನೆಯ ಒಕ್ಕೂಟದ ಕಾರ್ಯಾಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್ ರವರು ಮಾತನಾಡಿ, ಜಯಂತಿಗಳನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೆ ಜ್ಯೋತಿ ಬಾಪುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ದಂಪತಿಗಳಿಗೆ ಆಶ್ರಯ ನೀಡಿದ ಫಾತಿಮಾ ಶೇಖ್ ರವರ ಮಾನವೀಯ ಮೌಲ್ಯಗಳನ್ನು ಅರಿತು ಬಾಳಿದಂತಹ ಮಹಾನ್ ಸಾಧಕರು, ಜಾತಿ ವ್ಯವಸ್ಥೆ ಇದ್ದಂತಹ ಕಾಲಘಟ್ಟದಲ್ಲಿ ಮಹಿಳೆಯರಿಗೆ ದಲಿತರಿಗೆ ಶೋಷಿತ ವರ್ಗದವರಿಗೆ ಶಿಕ್ಷಣ ಕೊಟ್ಟಂತಹ ಮಹಿಳೆಯಾಗಿದ್ದಾರೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕೂನಿಕೆರೆ ಹೆಚ್.ಎಸ್.ಮಾರುತೇಶ, ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ರಾಮಚಂದ್ರ, ರಾಜ್ಯಕಾರ್ಯದರ್ಶಿ ರಾಘವೇಂದ್ರ, ದಲಿತಪರ ಸಂಘಟನೆ ಒಕ್ಕೂಟದ ತಾಲ್ಲೂಕು ಉಪಾಧ್ಯಕ್ಷರಾದ ಘಾಟ್ ರವಿಕುಮಾರ್, ಕಾಂಗ್ರೆಸ್ ತಿರುಪತಿ ದಾದು, ಉಡುವಳ್ಳಿ ಶಬುದ್ದೀನ್, ಲಕ್ಷ್ಮಣ್ ರಾವ್, ಬಳಗಟ್ಟ ರಘು, ಸಾಧಿಕ್ ಉಲ್ಲ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
