
ಹಿರಿಯೂರು:
ಅಕ್ಷರ ವಂಚಿತ ಸಮುದಾಯಗಳ ಬದುಕಿಗೆ ಶಿಕ್ಷಣ ಕ್ರಾಂತಿಯಅಡಿಗಲ್ಲು ಹಾಕಿ ಸಾಮಾಜಿಕ ಅಸಮಾನತೆ ಶೋಷಣೆ ಮೂಢನಂಬಿಕೆಗಳ ವಿರುದ್ಧ ಸಿಡಿದು ಭಾರತೀಯ ಮಹಿಳೆಯರ ಕಲಿಕೆಗೆ ಭದ್ರ ಬುನಾದಿ ಹಾಕಿದ ಮಹಿಳೆ ಸಾವಿತ್ರಿಬಾಯಿಪುಲೆ ಅವರು ಆಗಿದ್ದಾರೆ ಎಂಬುದಾಗಿ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಡಾ.ಡಿ.ಧರಣೇಂದ್ರಯ್ಯ ಅವರು ಹೇಳಿದರು.
ತಾಲ್ಲೂಕಿನ ಭೀಮನಬಂಡೆ ಗ್ರಾಮದ ಯಜ್ಞವಲ್ಕ್ಯ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ (ರಿ) ಸಕ್ಕರ, ಹಾಗೂ ಯಜ್ಞವಲ್ಕ್ಯ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು – ಭೀಮನಬಂಡೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಪುಲೆ ಅವರ 195 ನೇ ಜನ್ಮದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಶೋಷಣೆ, ಅತ್ಯಾಚಾರ, ಮಹಿಳಾ ಅಪಹರಣ ಹಾಗು ಮಾರಾಟ, ಮರ್ಯಾದ ಹತ್ಯೆ, ದೌರ್ಜನ್ಯದಂತ ಪ್ರಕರಣಗಳು ತಾಂಡವವಾಡುತ್ತಿದ್ದು, ಧರ್ಮ –ಜಾತಿ ಹೆಸರಿನಲ್ಲಿ ಅಮಾನವೀಯ ಕೃತ್ಯಗಳನ್ನು ಎಸಗುತ್ತಿರುವುದು ದುರಂತದ ವಿಷಯವಾಗಿದೆ ಎಂದರಲ್ಲದೆ,
ಇವುಗಳಿಂದ ಇತ್ತೀಚಿನ ದಿನಗಳಲ್ಲಿ ಮಾನವ ಸಂಬಂಧಗಳಲ್ಲಿ ಹೊಂದಾಣಿಕೆ ಹಾಗೂ ಐಕ್ಯತೆಗೆ ಧಕ್ಕೆಯಾಗಿದ್ದು, ಮಾನವೀಯ ಮೌಲ್ಯಗಳು ಕಣ್ಮರೆಯಾಗಿವೆ ಎಂಬುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಜ್ಞವಲ್ಕ್ಯ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಟಿ.ಸುರೇಶ್ ಅವರು ಮಾತನಾಡಿ ಜಗತ್ತಿನ ಇತಿಹಾಸದಲ್ಲಿ ಶಿಕ್ಷಣ ಕ್ರಾಂತಿಯ ಹೆಜ್ಜೆಗಳು ಹೆಚ್ಚು ಹೆಚ್ಚು ಗಟ್ಟಿಯಾಗಿ ನಿಂತಿರುವುದು ಭಾರತ ದೇಶದ ನೆಲೆಗಳಲ್ಲಿ ಶಿಕ್ಷಣವೆಂಬುದು ಕೆಲವೊಂದು ಸಮುದಾಯಕ್ಕೆ ಸೀಮಿತವಾದ ಸಂದರ್ಭದಲ್ಲಿ
ಅವಕಾಶ ವಂಚಿತ ಶೂದ್ರಾತಿಶೂದ್ರ ಹಾಗೂ ಬಡವರ್ಗದ ಹೆಣ್ಣುಮಕ್ಕಳ ಕಲಿಕೆಗಾಗಿ ದಿಟ್ಟ ಹೆಜ್ಜೆ ಅವರ ಶ್ರೇಯೋಭಿವೃದ್ಧಿಗೆ ಹೋರಾಡಿದ ಮಾತೆ ಸಾವಿತ್ರಿಬಾಯಿಪುಲೆಯವರು ಇಂದಿನ ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದುಕಿಗೆ ಸ್ಪೂರ್ತಿಯಾಗಿದ್ದಾರೆ ಎಂಬುದಾಗಿ ಅವರು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕಿ ಭಾನುಮತಿ ಅವರು ಮಾತನಾಡಿ ರೂಢಿ, ಸಂಪ್ರದಾಯ, ಕಂದಾಚಾರ, ಮೂಢನಂಬಿಕೆ, ಸಾಮಾಜಿಕ ಪಿಡುಗು ಹಾಗೂ ತನಗಾದ ಅವಮಾನಗಳ ಮೆಟ್ಟಿನಿಂತು ಭಾರತೀಯ ಮಹಿಳೆಯರಿಗೆ ಶಿಕ್ಷಣವನ್ನು ಕಲಿಸಿ ಸ್ವಂತ ಖರ್ಚಿನಿಂದ ಶಾಲೆಗಳನ್ನು ತೆರೆದು ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿದ ಕೀರ್ತಿ ಸಾವಿತ್ರಿಬಾಯಿಪುಲೆ ದಂಪತಿಗಳಿಗೆ ಸಲ್ಲುತ್ತದೆ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರಾದ ನಿವೃತ್ತ ಮುಖ್ಯ ಶಿಕ್ಷಕಿ ಟಿ.ಯಮುನಾ ಭಾನುಮತಿ, ಟ್ರಸ್ಟ್ ಕಾರ್ಯದರ್ಶಿ ಮಾನಸ ಮಂಜುನಾಥ್, ತಾಲ್ಲೂಕಿನ ಇನ್ನರ್ ವೀಲ್ಹ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಟಿ.ಸರ್ವಮಂಗಳ, ನ್ಯಾಷನಲ್ ಇನ್ಪೈರ್ ಅವಾರ್ಡ್ ಪ್ರಶಸ್ತಿ ಪುರಸ್ಕೃತರಾದ ಹೆಚ್.ವಿ. ರುಕ್ಮಿಣಿ, ಗೋವಿಂದಾರಾಜು, ಸಾವಿತ್ರಿ ಬಾಯಿಪುಲೆ, ಶಿಕ್ಷಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆಯಾದ ಆರ್.ಎ. ಸ್ವಪ್ನ ಇವರುಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್, ಸ್ವಾಮಿವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ, ಯವ ಮುಖಂಡರುಗಳಾದ ಮಂಜುನಾಥಗೌಡ, ಉಪನ್ಯಾಸಕರಾದ ಯು.ಹರ್ಷ, ಕೆ.ಶಿವಾನಂದ್, ಆರ್.ರಂಗನಾಥ್, ವರದೇಗೌಡ, ಮಹಾಂತೇಶ್, ಪ್ರವೀಣ್, ಅಭಿಷೇಕ್, ಸರಸ್ವತಿ, ತೇಜು, ಸಿಂಧು, ಅನನ್ಯ, ಬಾಗ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
