March 2, 2026
00001

ಹಿರಿಯೂರು:

ದೇಶದಲ್ಲಿ ಅಕ್ಷರ ಕ್ರಾಂತಿ ನಡೆಸಿದ ಅಕ್ಷರದವ್ವ, ದಣಿವರಿಯದ ಸತ್ಯಶೋಧಕಿ, ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದ ದಿಟ್ಟಮಹಿಳೆ, ಶ್ರೀಮತಿ ಸಾವಿತ್ರಬಾಯಿ ಫುಲೆ ಅವರ ತತ್ವ-ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಮಹಿಳೆಯರು ಶಿಕ್ಷಣವಂತರಾಗಲು ಅವರ ಅಂದಿನ ಹೋರಾಟವೇ ಕಾರಣ ಎಂಬುದಾಗಿ  ಪ್ರಾಂಶುಪಾಲರಾದ ಕೆ.ರಂಗಪ್ಪ ಹೇಳಿದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಬಾಯಿ ಫುಲೆರವರ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಉಪನ್ಯಾಸಕ ಆಂಜನೇಯ ಮಾತನಾಡಿ, ಜ್ಯೋತಿಬಾ ಫುಲೆ ಅವರ ತತ್ವಗಳು ಮತ್ತು ಪ್ರಗತಿಪರ ದೃಷ್ಠಿಕೊನವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಜೀವಮಾನವಿಡಿ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದರು. ಸಮಾಜದಲ್ಲಿ ಸಮಾನ ಶಿಕ್ಷಣ ನೀಡಲು ನ್ಯಾಯಯುತ ಹೋರಾಟ ನಡೆಸಿದ ಸಾವಿತ್ರಪುಲೆ ಈ ಸಮಾಜ ಆರೋಗ್ಯಪೂರ್ಣವಾಗಿರಲು ಶಿಕ್ಷಣ ಅತ್ಯವಶ್ಯಕವೆಂದು ಪ್ರತಿಪಾದಿಸಿದರು ಎಂದರು.

ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಕೂನಿಕೆರೆ ಮಾರುತೇಶ್ ಮಾತನಾಡಿ, ಶಿಕ್ಷಣದಿಂದಲೇ ಸಮಾಜದ ಉದ್ದಾರ ಸಾಧ್ಯವೆಂದು ನಂಬಿದ್ದ ಸಾವಿತ್ರಪುಲೆ ಅವರು ದಲಿತ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರಲ್ಲಿ ಅಜ್ಞಾನ ದೂರಗೊಳಿಸಿ ಮಕ್ಕಳನ್ನು ಶಾಲೆಗೆ ಕರೆತಂದರು. ಆ ಮೂಲಕ ಅಕ್ಷರ ಜ್ಞಾನ ಇಲ್ಲದವರಿಗೆ ಶಿಕ್ಷಣ ನೀಡಿದ ಮಹಾ ತಾಯಿ. ಪತಿಯೊಂದಿಗೆ ಸೇರಿ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದು, ದಲಿತರು ಶಿಕ್ಷಣದಲ್ಲಿ ಸಾಧನೆ ಮಾಡಲು ಬುನಾದಿ ಹಾಕಿಕೊಟ್ಟರು ಎಂದರು.

ಈ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಮಹಿಳಾ ಘಟಕ ಅಧ್ಯಕ್ಷೆ ಅಂಬಿಕಾ, ಉಪನ್ಯಾಸಕರಾದ ಎಚ್.ಆರ್.ಲೋಕೇಶ್, ಶಾಂತಕುಮಾರ್, ನಾಗೇಂದ್ರಪ್ಪ, ಈ.ಪ್ರಕಾಶ್, ಮಂಜು,  ಶಾಂತಲಾ, ರೇಷ್ಮಾ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *