

ಹಿರಿಯೂರು:
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ 2025–26ನೇ ಸಾಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯನ್ನು ಸೆಪ್ಟೆಂಬರ್ 22ರಿಂದ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಸಮಾಜದ ಬಂಧುಗಳು ಜಾತಿಗಣತಿ ಕಾಲಂನಲ್ಲಿ ಕಡ್ಡಾಯವಾಗಿ ಕಾಡುಗೊಲ್ಲ ಎಂದು ನಮೂದಿಸಬೇಕು ಎಂಬುದಾಗಿ ಕಾಡುಗೊಲ್ಲ ಸಮಾಜದ ತಾಲೂಕು ಅಧ್ಯಕ್ಷರಾದ ಪಿ.ಆರ್.ದಾಸ್ ಹೇಳಿದರು.

ತಾಲ್ಲೂಕಿನ ಬಬ್ಬೂರು ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ತಾಲ್ಲೂಕಿನ ಕಾಡುಗೊಲ್ಲ ಸಮಾಜದ ವತಿಯಿಂದ ಮನೆಮನೆಗೆ ಭೇಟಿ ನೀಡಿ, ಕಾಡುಗೊಲ್ಲ ಸಮಾಜದ ಬಂಧುಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ನಗರಸಭೆ ಮಾಜಿಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶ್ರೀಮತಿ ಶಿವರಂಜಿನಿ ಯಾದವ್ ಮಾತನಾಡಿ, ಜಾತಿಗಣತಿ ಕಾಲಂನಲ್ಲಿ ಕಡ್ಡಾಯವಾಗಿ ಕಾಡುಗೊಲ್ಲ ಎಂದು ನಮೂದಿಸಬೇಕು ಹಾಗೂ ಕುಲಕಸುಬಿನಲ್ಲಿ ಕುರಿಸಾಕಾಣಿಕೆ ಮತ್ತು ಪಶುಸಂಗೋಪನೆ ಎಂದು ದಾಖಲಿಸಬೇಕು ಎಂಬುದಾಗಿ ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಸಮಾಜದ ತಾಲ್ಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಸಮಾಜದ ಮುಖಂಡರು ಹಾಗೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.