

ಹಿರಿಯೂರು:
ಸರ್ .ಎಂ.ವಿಶ್ವೇಶ್ವರಯ್ಯನವರು ಕೇವಲ ಇಂಜಿನಿಯರ್ ಆಗಿರುವುದಷ್ಟೇ ಅಲ್ಲದೆ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಣೆಕಟ್ಟೆಗಳನ್ನು ಕಟ್ಟುವುದು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದು ಪ್ರಗತಿಗೆ ಬೇಕಾದ ಯೋಜನೆಗಳನ್ನು ರೂಪಿಸಿದವರಾಗಿದ್ದಾರೆ ಎಂಬುದಾಗಿ ತಾಲ್ಲೂಕು ವೃತ್ತಿನಿರತ ಆರ್ಕಿಟೆಕ್ಟ್ ಮತ್ತು ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷರಾದ ಹೆಚ್.ಪಿ.ಗುರುದೇವ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ತಾಲ್ಲೂಕು ವೃತ್ತಿನಿರತ ಆರ್ಕಿಟೆಕ್ಟ್ ಮತ್ತು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಹಿರಿಯೂರಿನಲ್ಲಿ ಇದೇ ಪ್ರಥಮ ಬಾರಿಗೆ ನಮ್ಮ ಸಂಘಟನೆಯು ಆರಂಭವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆಗಳು ಅಪಾರವಾಗಿದೆ, ಇಂದಿನ ಇಂಜಿನಿಯರ್ ಗಳು ಅವರನ್ನು ಮಾದರಿಯಾಗಿ ಸ್ವೀಕರಿಸುವ ಮೂಲಕ ಉತ್ತಮ ಇಂಜಿನಿಯರ್ ಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ನಿವೃತ್ತ ಪಿ.ಡಬ್ಲೂ.ಡಿ ಇಂಜಿನಿಯರ್ ಮಂಜಣ್ಣ ಅವರು ಮಾತನಾಡಿ, ವಿಶ್ವೇಶ್ವರಯ್ಯನವರು ದೇಶದ ಅಭಿವೃದ್ಧಿ ಕಡೆ ಹೆಚ್ಚಿನ ಆದ್ಯತೆ ನೀಡಿದ್ದರು. ಹಿಂದುಳಿದವರು ಹಾಗೂ ಮಹಿಳೆಯರ ಅಭಿವೃದ್ಧಿಯ ಬಗ್ಗೆ ಶ್ರಮಪಟ್ಟಿದ್ದರು. ಅವರ ಆದರ್ಶಗಳು ನಮಗೆ ದಾರಿದೀಪ ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯಇಂಜಿನಿಯರ್ ಗಳಾದ ರವೀಂದ್ರಪ್ಪ, ಮಂಜುನಾಥ್, ಶ್ರೀರಂಗ, ಇತರರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಸಂಘದ ಉಪಾಧ್ಯಕ್ಷರಾದ ಸಿ.ಎಂ.ದಿವಾಕರ್, ಕಾರ್ಯದರ್ಶಿ ಹರ್ಷ, ಸಹ ಕಾರ್ಯದರ್ಶಿ ಗಿರಿದಾಸ್, ಮಹಮದ್ ಮಾಜ್, ನಾಗರಾಜ್, ಮಂಜುನಾಥ್ ,ಪ್ರಸಾದ್ , ರಮೇಶ್, ಸೈಯದ್ ಅಹಮದ್ , ಪ್ರಸನ್ನ ಕುಮಾರ್, ಮನೋಜ್, ರಾಜು, ರಾಘವೇಂದ್ರ ,ಪ್ರದೀಪ್, ನವೀನ್ ಕುಮಾರ್, ಶ್ರೀನಿಧಿ, ಮಹಮ್ಮದ್ ಜಾವೀದ್, ಪಾಂಡುರಂಗ, ಮುದ್ದುರಾಜ್, ದೇಸಾಯಿ ಹಾಗೂ ಅನೇಕ ಇಂಜಿನಿಯರ್ ಗಳು ಉಪಸ್ಥಿತರಿದ್ದರು.