
ಹಿರಿಯೂರು :
ಕರ್ನಾಟಕ ರಾಜ್ಯದ ಬಯಲುಸೀಮೆ, ಮಲೆನಾಡು, ಕರಾವಳಿ, ಕಲ್ಯಾಣ ಕರ್ನಾಟಕ ಸೇರಿದಂತೆ 19 ಜಿಲ್ಲೆಗಳು ಹಾಗೂ 47 ತಾಲ್ಲೂಕುಗಳಲ್ಲಿ 27 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿರುವ ಸಮಸ್ತ ಕುಂಚಿಟಿಗರು ಒಗ್ಗಟ್ಟು ಪ್ರದರ್ಶನ ಮಾಡಿ, ಇದೇ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ ಜಾತಿಗಣತಿಯಲ್ಲಿ “ಕುಂಚಿಟಿಗ “ಎಂದು ಬರೆಯಿಸಬೇಕು ಎಂಬುದಾಗಿ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಅವರು ಮನವಿ ಮಾಡಿದ್ದಾರೆ.
ಕಳೆದ 1928ರಲ್ಲಿ ಮೈಸೂರು ಸರ್ಕಾರ ಹೊರಡಿಸಿದ ಆದೇಶ, ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಹಾಗೂ ವಿವಿಧ ತಾಲ್ಲೂಕಿನ ತಹಶೀಲ್ದಾರರಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಪ್ರಕಾರ ಕುಂಚಿಟಿಗ ಯಾವುದೇ ಜಾತಿಯ ಉಪಜಾತಿ ಅಲ್ಲ. ಆದ್ದರಿಂದ ಉಪಜಾತಿ ಕಾಲಂನಲ್ಲಿ ಇಲ್ಲ ಎಂದು ಬರೆಯಿಸಲು ಸರ್ಕಾರಿ ದಾಖಲೆಗಳ ಸಹಿತ ಅವರು ಮನವಿ ಮಾಡಿದ್ದಾರೆ.
ಕುಂಚಿಟಿಗ ಜಾತಿಗೆ ಕೇಂದ್ರ ಸರ್ಕಾರದ ಓ.ಬಿ.ಸಿ.ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಈಗಾಗಲೇ ಶಿಫಾರಸ್ಸು ಮಾಡಿರುವುದರಿಂದ ಎಲ್ಲರೂ ಕುಂಚಿಟಿಗ ಎಂದು ಬರೆಯಿಸಿದರೆ ಮುಂದೆ ಕೇಂದ್ರ ಸರ್ಕಾರದ ಮೀಸಲಾತಿ ಪಡೆಯಲು ಅನುಕೂಲ ಆಗುತ್ತದೆ, ಇದರಿಂದಾಗಿ ನಮ್ಮ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ ಎಂಬುದಾಗಿ ಎಸ್.ವಿ.ರಂಗನಾಥ್ ಅವರು ತಿಳಿಸಿದ್ದಾರೆ.

