March 2, 2026
000001

ಹಿರಿಯೂರು :

ದೆಹಲಿಯಲ್ಲಿ ವಾಸವಿದ್ದ ಕುಂಚಿಟಿಗರು ಮುಸ್ಲಿಮರ ದಾಳಿಯಿಂದ ಕುಂಚಿಟಿಗ ಕುಲಶೀಲದ ರಕ್ಷಣೆಗಾಗಿ ಹಿಂದೂ ರಾಜರು ಇರುವ ವಿಜಯನಗರ ಸಾಮ್ರಾಜ್ಯದಲ್ಲಿ ಬಂದು ನೆಲೆಸಿದರು. ವಿಜಯನಗರ ಪತನದ ನಂತರ ಕರ್ನಾಟಕ, ಆಂಧ್ರಪ್ರದೇಶ,ತಮಿಳುನಾಡು, ಕೇರಳ ,ಮಹಾರಾಷ್ಟ್ರ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದರು, ಇದೀಗ ಮನೆದೇವರ ಹುಡುಕಿಕೊಂಡು ಕರ್ನಾಟಕದತ್ತ ಬರುತ್ತಿರುವುದು ಸ್ವಾಗತಾರ್ಹ ಎಂಬುದಾಗಿ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಹೇಳಿದರು.

ತಾಲೂಕಿನ ಚಿಲ್ಲಳ್ಳಿ ಗ್ರಾಮದ ಕುಂಚಿಟಿಗರ ಕುಲದೇವರಾದ ಶ್ರೀಕಾಟಮಹಲಿಂಗೇಶ್ವರ ದೇವಸ್ಥಾನದಲ್ಲಿ ತಮಿಳುನಾಡು ಕುಂಚಿಟಿಗರಿಗೆ ಸ್ವಾಗತ ಕಾರ್ಯಕ್ರಮ ಹಾಗೂ 2026ರ ಕುಂಚಿಟಿಗರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ, ನಂತರ ಅವರು ಮಾತನಾಡಿದರು.

ತಮಿಳುನಾಡಿನಲ್ಲಿ ನೆಲೆಸಿರುವ ಕುಂಚಿಟಿಗ ಕುಲಬಾಂಧವರು ತಮ್ಮ ಕುಲಮೂಲದ ಮನೆ ದೇವರುಗಳನ್ನು ಹುಡುಕಿಕೊಂಡು ಈ ಹಿಂದೆ ಪಾದಯಾತ್ರೆಯಲ್ಲಿ ಎತ್ತಿನ ಬಂಡಿಗಳಲ್ಲಿ ಬರುತ್ತಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಒಗ್ಗೂಡಿ ಬಸ್ಸು ಕಾರುಗಳಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ,ಮಧುಗಿರಿ, ಶಿರಾ, ಹಿರಿಯೂರು ಪ್ರದೇಶದ ಭಾಗದ ಮನೆ ದೇವರುಗಳಿಗೆ ಎಷ್ಟೇ ಕಷ್ಟವಿದ್ದರೂ ಹುಡುಕಿಕೊಂಡು ಬರುತ್ತಾರೆ ಬಂದು ಪೂಜೆ ಸಲ್ಲಿಸಿ ಸ್ವಾಮಿದರ್ಶನ ಮಾಡಿ ಪುನೀತರಾಗುತ್ತಾರೆ.

ಇದರಿಂದ ಅವರ ಮುಂದಿನ ಪೀಳಿಗೆಯ ಮಕ್ಕಳಿಗೆ ಸಂಸ್ಕಾರ ಮೌಲ್ಯ ಉತ್ತಮ ರೀತಿಯಲ್ಲಿ ಲಭಿಸುತ್ತದೆ ಇವರ ಈ ರೀತಿಯ ನಡೆಗಳು ನಮಗೆಲ್ಲ ಮಾದರಿಯಾಗಬೇಕು, ಇಲ್ಲಿಯವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಬಂದು ಹೋಗಿ ವಿಶ್ವಾಸ  ಬೆಳೆಸಲಾಗಿದೆ ಅದೇ ರೀತಿ ಮುಂದಿನ ದಿನಗಳಲ್ಲಿ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಮುಖಾಂತರ ಸಮಾಜದ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿ 2026 ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕುಂಚಿಟಿಗರ ಸಂಘದ ಅಧ್ಯಕ್ಷರಾದ ಪ್ರೊ.ಮೈಸೂರುಶಿವಣ್ಣ ಮಾತನಾಡಿ, ಕರ್ನಾಟಕದಲ್ಲ ಧರ್ಮಪ್ರಕಾಶ್ ರಾವ್ ಬಹದ್ದೂರ್ ಬನ್ಮಯ್ಯನವರು ಕುಂಚಿಟಿಗರ ಉಳಿವಿಗಾಗಿ ಅವಿರತ ಶ್ರಮಪಟ್ಟು ಬನ್ಮಯ ವಿದ್ಯಾಸಂಸ್ಥೆಗಳು, ವಸತಿ ನಿಲಯಗಳನ್ನು ಮೈಸೂರು ಭಾಗದಲ್ಲಿ ತೆರೆದು ಸಮಾಜಕ್ಕೆ ಮಾದರಿಯಾದರು ಎಂದು ತಿಳಿಸಿದರು.

ತುಮಕೂರಿನ ಕೆಂಪೇಗೌಡ ವಿದ್ಯಾಸಂಸ್ಥೆಯ ದಾಸೇಗೌಡ ಮಾತನಾಡಿ, ತಮಿಳುನಾಡು ಕುಂಚಿಟಿಗರು ಅತ್ಯಂತ ಪ್ರೀತಿ, ಆತ್ಮೀಯತೆ  ಗೌರವ ಅಭಿಮಾನದರೆಗಳನ್ನು ಕರ್ನಾಟಕದೊಂದಿಗೆ ಹೊಂದಿದ್ದಾರೆ ನಾವುಗಳು ಸಹ ಅವರೊಂದಿಗೆ ಅದೇ ರೀತಿ ಪ್ರೀತಿ ವಿಶ್ವಾಸವನ್ನು ಹೊಂದಿದ್ದೇವೆ, ಇದರಿಂದ ಸಾಮರಸ್ಯ ಬೆಳೆಯುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಲ್ಲಹಳ್ಳಿ ಶ್ರೀಕಾಟಮಹಾಲಿಂಗೇಶ್ವರ ದೇವಸ್ಥಾನದ ಗುಡಿಗೌಡ ನಿಜಲಿಂಗಪ್ಪ, ಪೂಜಾರ್ ಪ್ರಕಾಶ್, ಶಶಿಧರ್, ರಾಮಣ್ಣ, ನಿವೃತ್ತ ಪ್ರಾಂಶುಪಾಲ ಮಹಾಲಿಂಗಪ್ಪ, ಪೂಜಾರ ಶಿವಣ್ಣ, ಗ್ರಾಮದ ಮುಖಂಡರುಗಳು ದೇವಸ್ಥಾನ ಸಮಿತಿಯವರು, ಮಹಿಳೆಯರು ತಮಿಳುನಾಡುನಿಂದ ಬಂದಿದ್ದ 65 ಜನ   ಕುಲಬಾಂಧವರಿಗೆ ಪೂಜೆ ಸಲ್ಲಿಸಿ, ಸನ್ಮಾನಿಸಿ, ಉಟೋ ಪಚಾರ ಮಾಡಿ ಬೀಳ್ಕೊಡುಗೆ ಮಾಡಿದರು.

ಆರಂಭದಲ್ಲಿ ರಾಜ್ಯ ಕುಂಚಿಟಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಹನುಮಂತರಾಯ ಸ್ವಾಗತಿಸಿದರು, ಜಿಲ್ಲಾ ಸಮಿತಿ ಪದಾಧಿಕಾರಿ ಕುಬೇರಪ್ಪ ವಂದನಾರ್ಪಣೆ ಮಾಡಿದರು. ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್ ಸ್ಮರಣಿಕೆಗಳನ್ನು ನೀಡಿದರು.

About The Author

Leave a Reply

Your email address will not be published. Required fields are marked *