
ಹಿರಿಯೂರು :
ಕನ್ನಡ ಚಿತ್ರರಂಗದ ಮಾನಸ ಸರೋವರ, ಪಡುವಾರಳ್ಳಿಪಾಂಡವರು, ರಂಗನಾಯಕಿ, ಅಮೃತಘಳಿಗೆಯಂತಹ ಹೆಸರಾಂತ ಚಲನಚಿತ್ರಗಳಲ್ಲಿ ನಟಿಸುವ ಮೂಲಕ “ಪ್ಲೇಬಾಯ್” ಎಂದೇ ಪ್ರಖ್ಯಾತಿ ಪಡೆದ ನೀರ್ನಳ್ಳಿ ರಾಮಕೃಷ್ಣ ಕನ್ನಡ ಚಿತ್ರರಂಗದ ಸುಂದರ ಪ್ರತಿಭಾವಂತ ನಟ ಅಷ್ಟೇ ಅಲ್ಲ, ಸೌಂದರ್ಯ ಹಾಗೂ ಪ್ರತಿಭೆ ಎರಡೂ ಮೇಳೈಸಿರುವ ಮೇರುನಟರಾಗಿದ್ದಾರೆ, ಇಂದು ರಾಮಕೃಷ್ಣರವರು ಹುಟ್ಟಿದ ದಿನ.
ಉತ್ತರ ಕರ್ನಾಟಕ ಶೈಲಿಯ ಸಂಗ್ಯಾಬಾಳ್ಯದಂತಹ ಚಲನಚಿತ್ರದಲ್ಲಿ ನಟಿಸುವ ಮೂಲಕ ರಾಷ್ಟ್ರಪ್ರಶಸ್ತಿ ಪಡೆದನಟ, ಶ್ರೀಯುತ ರಾಮಕೃಷ್ಣ ಅವರು 1954ರ ವರ್ಷದಲ್ಲಿ ಜನಿಸಿದರು. ಅವರದ್ದು ಮಲೆನಾಡಿನ ಸಿರಸಿ ಸಮೀಪದ ಪುಟ್ಟ ಊರು ನೀರ್ನಳ್ಳಿ. ಕೃಷಿಕರ ಹಾಗೂ ಕಲಾವಿದರ ನೆಲೆವೀಡು. ಈ ಊರಿನ ರಾಮಕೃಷ್ಣ, ಇಡೀ ರಾಜ್ಯಕ್ಕೆ ನೀರ್ನಳ್ಳಿ ರಾಮಕೃಷ್ಣ ಎಂದೇ ಪರಿಚಿತರು. ರಾಮಕೃಷ್ಣರು ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಕಲಿತರು.
ಒಮ್ಮೆ ಗುಬ್ಬಿವೀರಣ್ಣ ಕಂಪನಿಯ ನಾಟಕ ಶಿರಸಿಗೆ ಬಂದಾಗ ಅದರಲ್ಲಿದ್ದ ಕಲಾವಿದರನ್ನು ಪರಿಚಯ ಮಾಡಿಕೊಂಡು,ನಾಟಕ ಕಂಪನಿ ಸೇರಿ ನಟನಾಗುವ ಆಸೆ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಗುಬ್ಬಿವೀರಣ್ಣನವರ ಹಿರೇ ಮಗಳು ಸುವರ್ಣಮ್ಮನವರು ನೀನು ಡಿಗ್ರಿ ಮುಗಿಸಿಕೊಂಡು ಬಾ ಎಂದು ಹೇಳಿದ್ದರಂತೆ. ಅವರಿಗೆ ರಾಮಕೃಷ್ಣ ಅವರನ್ನು ಕಂಡರೆ ತುಂಬಾ ಅಕ್ಕರೆ, “ಇವನು ನನ್ನ ಸಾಕು ಮಗ” ಎಂದು ಆಗಾಗ ಹೇಳುತ್ತಿದ್ದರಂತೆ.
ಮುಂದೆ ಸುವರ್ಣಮ್ಮನವರೇ ರಾಮಕೃಷ್ಣರನ್ನು ಡಾ.ರಾಜಕುಮಾರ್ ಅವರಿಗೂ ಪರಿಚಯ ಮಾಡಿಕೊಟ್ಟರು. ಅಣ್ಣಾವ್ರು ರಾಮಕೃಷ್ಣರವರಿಗೆ ಬಬ್ರುವಾಹನ ಚಲನಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ನೀಡುವ ಮೂಲಕ ಅವಕಾಶ ಮಾಡಿಕೊಟ್ಟರು. ನಂತರ ರಾಮಕೃಷ್ಣರವರು ಸುಮಾರು 200 ಚಲನಚಿತ್ರಗಳಲ್ಲಿ ಅಭಿನಯಿಸಿದರಲ್ಲದೆ, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ನಿರ್ದೇಶನದ ಪಡುವಾರಳ್ಳಿ ಪಾಂಡವರು, ಅಮೃತ ಘಳಿಗೆ, ರಂಗನಾಯಕಿ, ಮಾನಸ ಸರೋವರ ಅಂತಹ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಗೆದ್ದರು.
ಆನಂತರ ಕೆ.ಬಾಲಚಂದರ್ ನಿರ್ದೇಶನದಲ್ಲಿ ತಮಿಳು ಚಿತ್ರದ ನಾಯಕನಾಗಿದ್ದರು. ಅವರದೇ ನಿರ್ದೇಶನದ ‘ಬೆಂಕಿಯಲ್ಲಿ ಅರಳಿದಹೂ’ ಚಿತ್ರದಲ್ಲೂ ಮನಸೆಳೆಯುವ ಅಭಿನಯ ನೀಡಿದ್ದರು. ನಾಗಾಭರಣರ “ಪ್ರಾಯ ಪ್ರಾಯ ಪ್ರಾಯ” ಅವರ ಮತ್ತೊಂದು ಪ್ರಸಿದ್ಧಚಿತ್ರ. ಅಂದಿನ ಯುಗದ ಚಿತ್ರಗಳಿಂದ ಇತ್ತೀಚಿನ ಯುವನಟರಾದ ಸುದೀಪ್,ದರ್ಶನ್, ಗಣೇಶ್ ರಂತಹ ಅನೇಕ ಯುವನಟರ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ.
ಆದರೆ ರಾಮಕೃಷ್ಣ ಇತ್ತೀಚಿನ ವರ್ಷಗಳಲ್ಲಿ ತಮ್ಮ ಊರಾದ ಶಿರಸಿಯ ನೀರ್ನಳ್ಳಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಊರಿನ ಮೂಲ ಕೃಷಿಯಾದ ಅಡಿಕೆ ಬೆಳೆ ಬೆಳೆಯುವಲ್ಲಿ ತೊಡಗಿಕೊಂಡಿರುವ ರಾಮಕೃಷ್ಣ, ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿನ ಕಡೆ ಬರುತ್ತಾರೆ. ನಾಲ್ಕೈದು ದಿನ ನಿಯತ್ತಾಗಿ ನಟಿಸಿ, ತಮ್ಮ ಸಂಭಾವನೆ ಪಡೆದು ಮತ್ತೆ ಶಿರಸಿ ಕಡೆ ತೆರಳಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ನೀರ್ನಹಳ್ಳಿಯ ನಿಸರ್ಗದ ಮಡಿಲಲ್ಲಿ ಕೃಷಿ ಮಾಡಿಕೊಂಡು ಆರಾಮದಿಂದಲೂ ಶುಭ್ರ ವಾತಾವರಣದಲ್ಲಿದ್ದಾರೆ. ಜೊತೆಗೆ ತಮ್ಮೂರಿನ ಕಡೆಯ ಹುಡುಗರಿಗಾಗಿ ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ಇರುವ ಅವರ ಇನ್ನೊಂದು ಮನೆಯಲ್ಲಿ ಹಾಸ್ಟೆಲ್ ಒಂದನ್ನು ತೆರೆದು, ಅವರೂರಿನ ಹುಡುಗರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ, ತಮ್ಮೂರಿನ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎನ್ನುವ ಸಹೃದಯ ಅವರದು.
ನೀರ್ನಳ್ಳಿ ರಾಮಕೃಷ್ಣರು ಕನ್ನಡ ಚಲನಚಿತ್ರರಂಗದಲ್ಲಿ ಹೆಸರು ಮಾಡಿರುವ ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡು ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ, ಶ್ರೀಯುತನೀರ್ನಳ್ಳಿ ರಾಮಕೃಷ್ಣರವರಿಗೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.

