

ಹಿರಿಯೂರು:
ಹಿರಿಯೂರು-ಧರ್ಮಪುರ ಮಾರ್ಗದಲ್ಲಿ ಹಲವು ತಿರುವು ಪ್ರದೇಶಗಳಲ್ಲಿ ಹಾಗೂ ತಾಲ್ಲೂಕಿನ ಬಬ್ಬೂರು ಗ್ರಾಮದ ತಿರುವಿನಲ್ಲಿ ಪಿ.ಡಬ್ಲೂ.ಡಿ ರಸ್ತೆ ತೀವ್ರ ಹದಗೆಟ್ಟು ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ನಿರಂತರ ಅಪಘಾತಗಳು ನಡೆಯುತ್ತಿರುವ ಬಗ್ಗೆ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಬ್ಯಾಡರಹಳ್ಳಿ ಶಿವಕುಮಾರ್ ರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪಿ.ಡಬ್ಲೂ.ಡಿ ಇಲಾಖೆ ಇದೆಯೇ ಇಲ್ಲವೇ ಎಂಬುದು ನಮಗೆ ನಿಜಕ್ಕೂ ಅನುಮಾನ ಉಂಟುಮಾಡಿದೆ, ಪಿ.ಡಬ್ಲೂ.ಡಿ ಅಧಿಕಾರಿಗಳು ಆಪೀಸಿನಲ್ಲಿ ಕುಳಿತು ದುಡ್ಡು ಎಣಿಸಿಕೊಳ್ಳುವುದನ್ನು ಬಿಟ್ಟು ಗ್ರಾಮೀಣ ರಸ್ತೆಗಳ ಬಗ್ಗೆ ಗಮನಹರಿಸಬೇಕಾಗಿದೆ.
ತಾಲ್ಲೂಕಿನ ಧರ್ಮಪುರ ಮಾರ್ಗದಲ್ಲಿ ಅನೇಕ ರಸ್ತೆ ತಿರುವುಗಳಿದ್ದು, ಈ ತಿರುವುಗಳ ಪ್ರದೇಶದಲ್ಲಿ ರಸ್ತೆ ಹದಗೆಟ್ಟು ಅಸಾಧ್ಯ ಗುಂಡಿಗಳು ಉಂಟಾಗಿರುವ ಬಗ್ಗೆ ಸುಮಾರು 10ಕ್ಕೂ ಹೆಚ್ಚು ಬಾರಿ ತಾಲ್ಲೂಕು ಆಡಳಿತ ಮತ್ತು ಪಿ.ಡಬ್ಲ್ಯು.ಡಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರಲ್ಲದೆ,
ಈ ಬಗ್ಗೆ ಕ್ಷೇತ್ರದ ಸಚಿವರು ಈ ಕೂಡಲೇ ಗಮನಹರಿಸಿ, ಪಿ.ಡಬ್ಲೂ.ಡಿ ಅಧಿಕಾರಿಗಳಿಗೆ ಈ ಗುಂಡಿಗಳನ್ನು ಮುಚ್ಚಿ ಸರಿಪಡಿಸಲು ಸೂಚಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ ನಡೆಯುವ ಅಪಘಾತಗಳನ್ನು ತಪ್ಪಿಸಬೇಕಾಗಿದೆ, ಇಲ್ಲವಾದಲ್ಲಿ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಪಿ.ಡಬ್ಲೂ.ಡಿ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದಾಗಿ ಹೇಳಿದ್ದಾರೆ.
ಅಲ್ಲದೆ, ಹಿರಿಯೂರು ತಾಲ್ಲೂಕು ಟಿ.ಬಿ.ಸರ್ಕಲ್ ನ ಡಬಲ್ ರೋಡ್ ಪ್ರದೇಶದಲ್ಲಿ ಸಂತೆ ನಡೆಯುವ ವೇಳೆ ರೈತರು ಬೆಳೆದ ಬೆಳೆಯನ್ನು ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡುವಾಗ ಅಕ್ರಮವಾಗಿ ನೆಲವಳಿ ವಸೂಲಿ ಮಾಡಲಾಗುತ್ತಿದ್ದು, ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಈ ಅಕ್ರಮದ ವಿರುದ್ಧ ಸಹ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.