March 2, 2026
00001

ಹಿರಿಯೂರು :

ತಮ್ಮ ಮನೆಯ ಪ್ರತಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ 2 ಹನಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸುವ ಮೂಲಕ ಭಾರತದಲ್ಲಿ ಮತ್ತೆ ಪೋಲಿಯೋ ರೋಗ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಪೋಲಿಯೋ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂಬುದಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ವೆಂಕಟೇಶ್ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಮುಖ್ಯ ರಸ್ತೆಯ ಗಾಂಧಿವೃತ್ತದಲ್ಲಿ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪುಟ್ಟ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ನಗರದ ರೋಟರಿ ಕ್ಲಬ್ ವತಿಯಿಂದ ನಡೆಸಲಾದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ  ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ನಿಮ್ಮ ಮಗುವನ್ನು ಪೋಲಿಯೋ ರೋಗದಿಂದ ಮುಕ್ತವಾಗಿಸಬೇಕು, ಮಕ್ಕಳ ಸುರಕ್ಷತೆಗಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರಲ್ಲದೆ,

ತಾಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಡಿಸೆಂಬರ್ 21 ರಿಂದ 23ರವರೆಗೆ ಮನೆಮನೆಗಳಿಗೆ ಹೋಗಿ, 5 ವರ್ಷದೊಳಗಿನ ಪುಟ್ಟ ಮಕ್ಕಳಿದ್ದರೆ ಎರಡು ಹನಿ ಪೋಲಿಯೋ ಲಸಿಕೆಯನ್ನು ಹಾಕುತ್ತಾರೆ, ಸಾರ್ವಜನಿಕರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಸಹಕರಿಸುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂಬುದಾಗಿ ಹೇಳಿದರು.

 ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ಮಾತನಾಡಿ, ಪೋಲಿಯೋ ಮುಕ್ತ ಭಾರತ ಎನ್ನುವುದು ಇಂಟರ್ನ್ಯಾಷನಲ್ ರೋಟರಿ ಸಂಸ್ಥೆಯ ಧ್ಯೇಯವಾಗಿದೆ, ಡಿಸೆಂಬರ್ 21 ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನ, ಪುಟ್ಟ ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಐದು ವರ್ಷದ ಒಳಗಿನ ಪ್ರತಿ ಮಗುವಿಗೆ ಎರಡು ಹನಿ ಪೋಲಿಯೋ ಹನಿ ಹಾಕಿಸುವುದರಿಂದ ಮುಂದೆ ಆಗಬಹುದಾದ ತೊಂದರೆಗಳಿಂದ ಮಕ್ಕಳನ್ನು ರಕ್ಷಿಸಬಹುದಾಗಿದೆ, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ವೆಂಕಟೇಶ್ ಅವರಿಗೆ ಅಭಿನಂದನೆಗಳು ಎಂದರು.

ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಕಾಸ್ ಜೈನ್, ಹೆಚ್‍.ಡಿ. ವಸಂತ್ ಕುಮಾರ್, ಆರ್.ಅನಿಲ್ ಕುಮಾರ್, ಆರ್.ಶಿವಕುಮಾರ್, ಎ.ರಾಘವೇಂದ್ರ, ಚಂದ್ರಹಾಸ್, ನಾಗಭೂಷಣ್, ಚಂದ್ರಕೀರ್ತಿ ಗುಜ್ಜಾರ್, ಹೆಚ್.ಎಸ್.ಪ್ರಶಾಂತ್, ರೆಡ್ ಕ್ರಾಸ್ ಪಿ.ಆರ್.ಸತೀಶ್ ಬಾಬು, ಟಿ.ಮಲ್ಲೇಶಪ್ಪ, ರವಿಕುಮಾರ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *