
ಹಿರಿಯೂರು :
ವಿದ್ಯಾರ್ಥಿಗಳು ಶಿಸ್ತು ಹಾಗೂ ತಾಳ್ಮೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು, ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದಾಗಿ ಖ್ಯಾತ ಹಿನ್ನೆಲೆ ಗಾಯಕಿ ಸುಪ್ರಿಯಾ ರಾಮ್ ಹೇಳಿದರು.
ನಗರದ ಗಂಗಾ ಸಮೂಹ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 20 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಜ್ಞಾನ ಗಂಗಾ-3 ಎಂಬ ವಿಶೇಷ ಸಂಚಿಕೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿಯವರು ಜ್ಞಾನ ಗಂಗಾ-3 ಎಂಬ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಇಂದಿನ ದಿನಗಳಲ್ಲಿ ಅನುದಾನರಹಿತ ಶಾಲೆಗಳು ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಇದೇ ನಿಟ್ಟಿನಲ್ಲಿ ಗಂಗಾ ಸೆಂಟ್ರಲ್ ಶಾಲೆ ಕೂಡ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಒತ್ತುಕೊಟ್ಟು ಮಕ್ಕಳಲ್ಲಿನ ಓದು ಬರಹ ಕಲಿಕೆಯ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದೆ ಎಂದರಲ್ಲದೆ,
ವಿದ್ಯಾರ್ಥಿಗಳು ಬೆಳಿಗ್ಗೆ ಎದ್ದ ತಕ್ಷಣ ಮೊದಲ 7 ನಿಮಿಷಗಳು ಮಕ್ಕಳು ಯಾವುದೇ ರೀತಿಯ ಸ್ಕ್ರೀನ್ ವೀಕ್ಷಿಸಲು ಟೈಮನ್ನು ಬಳಸಿಕೊಳ್ಳದಿರುವುದು.ಸಂಜೆ ಶಾಲೆಯಿಂದ ಬಂದ ನಂತರ ಪೋಷಕರು ಏಳು ನಿಮಿಷ ಮಕ್ಕಳೊಂದಿಗೆ ಶಾಲೆಯ ಚಟುವಟಿಕೆಗಳ ಬಗ್ಗೆ ಮಾತನಾಡಬೇಕು ಮತ್ತು ರಾತ್ರಿ ಮಲಗುವ ಮುನ್ನ ಮತ್ತೆ ಏಳು ನಿಮಿಷ ಮಕ್ಕಳೊಂದಿಗೆ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಪಠ್ಯವಲ್ಲದ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡುವುದರಿಂದ ಮಕ್ಕಳ ಮತ್ತು ಪೋಷಕರ ನಡುವೆ ಒಂದು ಒಳ್ಳೆಯ ಅನುಬಂಧ ಬೆಳೆಯುತ್ತದೆ ಎಂದು ಮೂರು 7ರ ಮಹತ್ವ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರ್ಮನ್ ಓಬಯ್ಯ ಮಾತನಾಡಿ, ಗಂಗಾ ಸಮೂಹ ವಿದ್ಯಾಸಂಸ್ಥೆಯನ್ನು ಕಟ್ಟಿ ವ್ಯವಸ್ಥಿತವಾಗಿ ನಡೆಸಲು ನಾನು ಶಾಲಾ ಹಂತದಲ್ಲಿ ಕಲಿತ ಅನುಭವದ ಪಾಠಗಳಿಂದಲೇ ಸಾಧ್ಯವಾಗಿದ್ದು, ಶಾಲಾ ಹಂತದ ಸಮಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರೆ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದಾಗಿ ಹೇಳಿದರು.
ವೇದಿಕೆಯಲ್ಲಿ ಗಂಗಾ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸಿದ್ದಗಂಗಮ್ಮ, ಕಾರ್ಯದರ್ಶಿಯಾದ ಡಾ. ಮನು, ಸದಸ್ಯರಾದ ಲಕ್ಷ್ಮಿ ಪ್ರಶಾಂತ್ ಸೇರಿದಂತೆ ಸಂಸ್ಥೆಯ ಪ್ರಾಂಶುಪಾಲರು, ಬೋಧಕರು ಬೋಧಕೇತರರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

