
ಹಿರಿಯೂರು:
ಭೀಮಾ ಕೋರೆಗಾಂವ್ ಕದನವು 1 ಜನವರಿ 1818 ರಂದು ಪುಣೆಯ ಬಳಿ ನಡೆದ ಐತಿಹಾಸಿಕ ಯುದ್ಧವಾಗಿದ್ದು, ಈ ಹೋರಾಟದ ನೆನಪಿಗಾಗಿ ಈ ವರ್ಷ ಜನವರಿ 1ರಂದು ನಗರದ ಟಿ.ಬಿ.ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಯ ಪಕ್ಕದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವದ ವಿಜಯಸ್ತಂಭವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತದೆ ಎಂಬುದಾಗಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಹಿರಿಯೂರು ತಾಲ್ಲೂಕು ಸಮಿತಿ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ತಾತ್ಕಾಲಿಕವಾಗಿ ನಿರ್ಮಿಸಿದ ಭೀಮ ಕೋರೆಗಾಂವ್ ವಿಜಯೋತ್ಸವದ ವಿಜಯಸ್ತಂಭವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಿ, ಆ ದಿನ ಭೀಮಾ ಕೋರೆಗಾಂವ್ ಕದನದ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸುವ ಸಣ್ಣ ಪ್ರಯತ್ನವನ್ನು ನಮ್ಮ ಸಂಘಟನೆಯಿಂದ ಹಾಗೂ ವಿಚಾರವಂತರನ್ನು ಕರೆಸಿ, ವಿಚಾರ ಮಂಡನೆ ಮಾಡಲಾಗುವುದು ಎಂಬುದಾಗಿ ಹೇಳಿದರು.

ಪೇಶ್ವೆಗಳ ಸೈನ್ಯ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸಣ್ಣ ಪಡೆ ನಡುವೆ ನಡೆದು, ಪೇಶ್ವೆಗಳ ಸೋಲಿಗೆ ಕಾರಣವಾದ ಈ ಯುದ್ಧದಲ್ಲಿ ಮಹಾರ್ ಸೈನಿಕರ ಶೌರ್ಯ ದಲಿತರ ಪಾಲಿಗೆ ಬ್ರಾಹ್ಮಣ ಪೇಶ್ವೆಗಳ ಅನ್ಯಾಯದ ವಿರುದ್ಧದ ವಿಜಯದ ಸಂಕೇತವಾಗಿ, ಅಸ್ಪೃಶ್ಯತೆಯ ವ್ಯವಸ್ಥೆಯ ವಿರುದ್ಧದ ಹೋರಾಟದ ಪ್ರತೀಕವಾಗಿ ಮಾರ್ಪಟ್ಟಿದೆ,
ಬಿ.ಆರ್. ಅಂಬೇಡ್ಕರ್ ಅವರಂತಹ ನಾಯಕರು ಇದನ್ನು ದಲಿತ ವಿಮೋಚನೆಯ ಸಂಕೇತವೆಂದು ಆಚರಿಸುತ್ತಾ ಬಂದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದಲಿತರ ಹೆಮ್ಮೆಯ ಪ್ರತೀಕವಾಗಿ ಗುರುತಿಸಿ, ಪ್ರತಿ ವರ್ಷ ಜನವರಿ 1 ರಂದು ಇಲ್ಲಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ರಾಘವೇಂದ್ರ, ತಾಲ್ಲೂಕು ಅಧ್ಯಕ್ಷರಾದ ಕೆ.ಓಂಕಾರಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣರಾವ್ , ಜಿಲ್ಲಾ ಉಪಾಧ್ಯಕ್ಷರಾದ ಕೆಂಚಪ್ಪ, ತಾಲ್ಲೂಕು ಕಾರ್ಯಾಧ್ಯಕ್ಷರಾದ ರಂಗಸ್ವಾಮಿ ಆಟೋ, ಆಟೋ ಘಟಕದ ಅಧ್ಯಕ್ಷರಾದ ವೈ.ರಮೇಶ್, ಯುವಘಟಕ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿಯಾದ ಹರ್ತಿಕೋಟೆ ಕೃಷ್ಣಮೂರ್ತಿ, ತಾಲ್ಲೂಕು ಕಾರ್ಯದರ್ಶಿಯಾದ ಅಜಯ್ ಹಾಗೂ ಡೆನಿಲ್ ರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

