
ಹಿರಿಯೂರು:
ಇದೇ ಡಿಸೆಂಬರ್ 21ರಿಂದ 24ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವು ತಾಲ್ಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಗಲು ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.
ಈ ಬಾರಿ ತಾಲ್ಲೂಕಿನಲ್ಲಿ 5 ವರ್ಷದೊಳಗಿರುವ 23,542 ಮಕ್ಕಳಿದ್ದು, 214 ಬೂತ್ ರಚಿಸಲಾಗಿದೆ. 428 ಕಾರ್ಯಕರ್ತರು ಕರ್ತವ್ಯ ನಿರ್ವಹಿಸಲಿದ್ದಾರೆ. ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಗುಯಿಲಾಳು ಟೋಲ್, ಗಾಂಧೀ ವೃತ್ತ, ಪ್ರವಾಸಿ ಮಂದಿರ ವೃತ್ತದ ಸಮೀಪ ಟ್ರಾನ್ಸಿಟ್ (ಸಾಗಣೆ) ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಸಾರ್ವಜನಿಕರು ಈ ಬೂತ್ ಗಳನ್ನು ಬಳಸಿಕೊಂಡು 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ಪೋಷಕರು ಪೋಲಿಯೋ ಕಾರ್ಯಕ್ರಮ ನಡೆಯುವ 4 ದಿನಗಳಲ್ಲಿ ಯಾವುದಾದರೂ ಒಂದು ದಿನ ಬಿಡುವು ಮಾಡಿಕೊಂಡು ಲಸಿಕೆ ಹಾಕಿಸಬೇಕು. ಸ್ವಲ್ಪ ಮೈಮರೆತರೂ ಮಕ್ಕಳಿಗೆ ಅಪಾಯ ಎದುರಾಗಬಹುದು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತಂಬಾಕು ನಿಯಂತ್ರಣ, ಕುಷ್ಠರೋಗ ಪ್ರಕರಣಗಳ ಪತ್ತೆ ಅಭಿಯಾನದ ಪ್ರಗತಿ, ಹುಳುಗಳ ಕಡಿತದಿಂದ ಹರಡುವ ಬ್ಯಾಕ್ಟೀರಿಯಾ, ಸೋಂಕು(ಚಿಕ್ಕಡೇರೋಗ) ಕಾಯಿಲೆಗಳ ಕುರಿತಂತೆ ಅವರು ಸಭೆಗೆ ಮಾಹಿತಿಯನ್ನು ನೀಡಿದರು. ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು , ರೋಟರಿ ಕ್ಲಬ್, ರೆಡ್ ಕ್ರಾಸ್, ಲಯನ್ಸ್ ಕ್ಲಬ್ ಮುಖ್ಯಸ್ಥರು ಉಪಸ್ಥಿತರಿದ್ದರು.

