March 6, 2026
546905174_1932620854259244_4571013686326700298_n

ಹಿರಿಯೂರು :

ಹಿರಿಯೂರು ನಗರ ಶೀಘ್ರ ಗತಿಯಲ್ಲಿ ಬೆಳೆಯುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 75,000 ಜನಸಂಖ್ಯೆಯನ್ನು ಹೊಂದಿದ್ದು, ಸುಮಾರು 29 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುತ್ತದೆ ಅಲ್ಲದೆ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಸುಮಾರು 400 ಸಂಖ್ಯೆಯಲ್ಲಿ ವಿನ್ಯಾಸಗೊಂಡಿರುವ ಬಡಾವಣೆಗಳು ಇದ್ದು, ಹಿರಿಯೂರು ನಗರಕ್ಕೆ ಪ್ರತ್ಯೇಕವಾಗಿ ಹಿರಿಯೂರು ಅಭಿವೃದ್ಧಿ ಪ್ರಾಧಿಕಾರ [ಹೆಚ್.ಯು.ಡಿ.ಎ] ರಚಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಕ್ರಮ ವಹಿಸಲು ಸೂಚಿಸಿದ್ದಾರೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ ಇನ್ನೂ ಸಾಕಷ್ಟು ಹೊಸ ಬಡಾವಣೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಸ್ತಾವನೆಗಳು ಬರುತ್ತಿರುತ್ತವೆ, ಹಿರಿಯೂರು ನಗರದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಗೆ ರಸ್ತೆ ಸಂಪರ್ಕ ಹೊಂದಿದ್ದು ಪ್ರತಿನಿತ್ಯ ಸಾವಿರಾರು ಜನರು ಹಿರಿಯೂರು ನಗರಕ್ಕೆ ವಿವಿಧ ಕೆಲಸ ಕಾರ್ಯಗಳಿಗಾಗಿ ಭೇಟಿ ನೀಡುತ್ತಿದ್ದು ಹಿರಿಯೂರು ನಗರವು ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುತ್ತದೆ, ಆದ್ದರಿಂದ ಹಿರಿಯೂರು ಅಭಿವೃದ್ಧಿ ಪ್ರಾಧಿಕಾರ ರಚಿಸುವುದು ಅತ್ಯಂತ ಅಗತ್ಯವಾಗಿದೆ ಎಂಬುದಾಗಿ ಅಧ್ಯಕ್ಷರು ಸಭೆಗೆ ವಿಚಾರ ಮಂಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಭೂ ಪರಿವರ್ತನೆ ವಿನ್ಯಾಸ ಅನುಮೋದನೆ ಹಾಗೂ ಇತರೆ ನಗರ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಾಂತ್ರಿಕ ಅಭಿಪ್ರಾಯವನ್ನು ನೀಡಲು ನಗರಾಭಿವೃದ್ಧಿ ಯೋಜನೆ ಅನುಮೋದನೆ ಅಗತ್ಯವಾಗಿದ್ದು, ಇದಕ್ಕೆ ಚಿತ್ರದುರ್ಗ ನಗರಾಭಿವೃದ್ಧಿ ಯೋಜನೆ ಇಲಾಖೆಯಿಂದ ವಾರಕ್ಕೆ ಒಂದುದಿನ ಮಾತ್ರ ತಾಂತ್ರಿಕಸಹಾಯಕರು ಬರುತ್ತಿದ್ದಾರೆ,

ಆದರೆ ಕೆಲವೊಮ್ಮೆ ಅವರು ಬಾರದೇ ನಗರದ ಜನ ದಿನಗಟ್ಟಲೆ ನಗರಸಭೆಯ ಮುಂದೆ ಕಾಯುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ನಗರದ ಅಭಿವೃದ್ಧಿಗೆ ನಿಜಕ್ಕೂ ಮಾರಕವಾಗಿದೆ, ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದ ಸಚಿವ ಡಿ.ಸುಧಾಕರ್ ರವರು ಹಿರಿಯೂರು ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲು ಸೂಚಿಸಲಾಗಿದ್ದು, ಈ ವಿಚಾರಕ್ಕೆ ನಮ್ಮ ಕೌನ್ಸಿಲ್ ಸಭೆಯ ಸಂಪೂರ್ಣ ಬೆಂಬಲವಿದೆ ಎಂಬುದಾಗಿ ಘೋಷಿಸಿದರು.

ನಗರದ ಮಹಾಯೋಜನೆ ನಕ್ಷೆ ಪರಿಸ್ತರಣೆಗೆ ಸಂಬಂಧಿಸಿದಂತೆ ಕಾರ್ಯಗಳನ್ನು ನಿರ್ವಹಿಸಲು ಟೆಂಡರ್ ಮೂಲಕ ಕ್ಯಾಡ್ಮಿ ಬೆಂಗಳೂರು ಇವರಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಈಗಾಗಲೇ ಅವರು ಶೇಕಡ 50ರಷ್ಟು ಭಾಗ ಕೆಲಸಗಳನ್ನು ಪೂರ್ಣಗೊಳಿಸಿ, ಕರಾರು ಪ್ರಕಾರ 5,99,250 ರೂಗಳು ಬಿಲ್ ಮೊತ್ತ ಪಾವತಿಸಲು ಕೋರಿರುತ್ತಾರೆ, ಅದಕ್ಕೆ ಸಭೆ ಅನುಮೋದನೆ ನೀಡಬೇಕು ಎಂಬುದಾಗಿ ಸಭೆಗೆ ವಿಚಾರ ಮಂಡಿಸಲಾಯಿತು.

ಈ ವಿಚಾರಕ್ಕೆ ಸರಾಸಗಟಾಗಿ ವಿರೋಧ ವ್ಯಕ್ತಪಡಿಸಿದ ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಈ.ಮಂಜುನಾಥ್, ಜಿ.ಎಸ್.ತಿಪ್ಪೇಸ್ವಾಮಿ, ಚಿತ್ರಜಿತ್ ಯಾದವ್, ಶಿವರಂಜಿನಿಯಾದವ್, ಇವರುಗಳು ಈಕಂಪನಿಯವರು ಏನು ಪರಿಷ್ಕರಣೆ ಮಾಡಿದ್ದಾರೆ, ನಗರಸಭೆ ವ್ಯಾಪ್ತಿ ಪ್ರದೇಶವನ್ನು ಸರಿಯಾಗಿ ಗುರುತು ಮಾಡಿಲ್ಲದ ಕಾರಣ ನಗರದ ಸುತ್ತಮುತ್ತಲಿನ ಗ್ರಾಮಗಳ ಕಂದಾಯಗಳು ಆಯಾ ಗ್ರಾಮ ಪಂಚಾಯಿತಿಗಳಿಗೆ ಕಟ್ಟಲಾಗುತ್ತಿದೆ, ಇದರಿಂದ ನಗರಸಭೆಗೆ ನಷ್ಟವಾಗುತ್ತಿದೆ ಎಂಬುದಾಗಿ ವಿರೋಧ ವ್ಯಕ್ತಪಡಿಸಿದರು.

ಅಂತಿಮವಾಗಿ ನಗರಸಭೆ ಅಧ್ಯಕ್ಷರು ಈ ವಿಚಾರವನ್ನು ಎಲ್ಲಾ ಸದಸ್ಯರನ್ನು, ನಕ್ಷೆ ಪರಿಷ್ಕರಣೆ ಕಂಪನಿಯವರನ್ನು, ಸಭೆ ಕರೆದು ಚರ್ಚಿಸಿ, ಅವರ ಹಣ ಬಿಡುಗಡೆ ಮಾಡೋಣ ಅಲ್ಲಿಯವರೆಗೂ ಅವರಿಗೆ ಕೊಡುವ ಬಿಲ್ ಹಣವನ್ನು ತಡೆಹಿಡಿಯಲಾಗುತ್ತದೆ ಎಂಬುದಾಗಿ ಸಭೆಗೆ ಭರವಸೆಯನ್ನು ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯನ್ನು ಶ್ರೀ ವಿನಾಯಕ ಎಲೆಕ್ಟ್ರಿಕಲ್ಸ್ ನ ನಾಗರಾಜುರವರಿಗೆ ಟೆಂಡರ್ ನೀಡಲಾಗಿದ್ದು, ಅವರ ಅವಧಿ ಇದೀಗ ಮಾರ್ಚ್ ತಿಂಗಳಿಗೆ ಮುಕ್ತಾಯವಾಗಿದ್ದು, ಆದರೂ ಸಾರ್ವಜನಿಕರ, ಸದಸ್ಯರುಗಳ ಒತ್ತಾಯದ ಮೇರೆಗೆ ರಿಪೇರಿ ಸೇರಿದಂತೆ ಹೊಸಹೊಸ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಕೆಲಸ ನಿರ್ವಹಣೆ ಮಾಡಿರುವ ಅವರಿಗೆ ಮುಂದುವರೆದ ಕಾರ್ಯಾದೇಶ ನೀಡಿ, ಬಿಲ್ ಪಾವತಿಸುವ ಬಗ್ಗೆ ಸಭೆಯಲ್ಲಿ ವಿಚಾರ ಮಂಡಿಸಲಾಯಿತು.

ಈ ವಿಚಾರಕ್ಕೆ ಒಕ್ಕೊರಲಿನಿಂದ ವಿರೋಧಿಸಿದ ನಗರಸಭೆ ಮಾಜಿ ಅಧ್ಯಕ್ಷ ಅಜಯ್ ಕುಮಾರ್ ಹಾಗೂ ಶಿವರಂಜಿನಿಯಾದವ್, ಈ ಗುತ್ತಿಗೆದಾರರು ಅತ್ಯಂತ ಕಳಪೆ ನಿರ್ವಹಣೆ ಮಾಡಿದ್ದು, ನಮ್ಮ ವಾರ್ಡ್ ಗಳಲ್ಲಿ ಬೀದಿದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಜನಪ್ರತಿನಿಧಿಗಳಾದ ನಾವುಗಳು ಜನರಿಂದ ಬೈಸಿಕೊಳ್ಳುವಂತಾಗಿದೆ, ಈ ಬಗ್ಗೆ ಎಂಜಿನಿಯರ್ ಗೆ ಕೇಳಿದರೆ ಅವರು ಕಾಂಗ್ರೆಸ್ ನವರಿಗೆ ಕೊಟ್ಟಿದ್ದಾರೆ ಎಂಬುದಾಗಿ ಸಬೂಬು ಹೇಳುತ್ತಾರೆ ಎಂಬುದಾಗಿ ಕಿಡಿ ಕಾರಿದರು,

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಈ.ಮಂಜುನಾಥ್ ಮಾತನಾಡಿ, ಬೀದಿದೀಪಗಳ ನಿರ್ವಹಣೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ನಾಗರಾಜು ಮೇಲೆ ವ್ಯಾಪಕ ದೂರುಗಳಿದ್ದು, ಯಾವುದೇ ವಿಷಯಗಳನ್ನು ನಮ್ಮ ಸದಸ್ಯರ ಜೊತೆ ಚರ್ಚಿಸದೆ ನೇರವಾಗಿ ಸಭೆಗೆ ತರುತ್ತೀರಾ, ಸಾರ್ವಜನಿಕರ ಕೆಲಸ ಮಾಡುವಾಗ ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಮುಲಾಜಿಗೂ ಒಳಗಾಗಬಾರದು ಎಂಬುದಾಗಿ ಹೇಳಿದರು.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎ.ವಾಸೀಂ ರವರು ಇನ್ನು ವಿದ್ಯುತ್ ಕಾಮಗಾರಿಗೆ ಸಂಬಂಧಪಟ್ಟಂತೆ ಪ್ಯಾಕೇಜ್ ಕಾಮಗಾರಿ ನೀಡಲಾಗುತ್ತಿದ್ದು, ಇನ್ನು ಮುಂದೆ ನಗರದಲ್ಲಿ ಬೀದಿದೀಪಗಳ ಸಮಸ್ಯೆ ಇರುವುದಿಲ್ಲ ಎಂಬುದಾಗಿ ಸಭೆಗೆ ತಿಳಿಸಿದರು.

ಪೌರಾಯುಕ್ತ ವಾಸೀಂರವರು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಎಬಿಸಿ ನಿಯಮಗಳ ಅನ್ವಯ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಟೆಂಡರ್ ಕರೆಯಲಾಗಿದ್ದು, ಡಾಕ್ಟರ್ ಅಭಿಲಾಶ್ ಎಚ್ ಆರ್ ಬೆಂಗಳೂರು ಇವರು ಒಬ್ಬರು ಮಾತ್ರ ಟೆಂಡರ್ ನಲ್ಲಿ ಭಾಗವಹಿಸಿದ್ದು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಅರ್ಹರಿದ್ದು ನಾಯಿ ಒಂದಕ್ಕೆ ರೂ 1,732 ರೂಗಳನ್ನು ಟೆಂಡರ್ ದರ ನಮೂದಿಸಿದ್ದಾರೆ ಎಂದರು.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಜಯ್ ಕುಮಾರ್, ಶಿವರಂಜಿನಿಯಾದವ್, ಗುಂಡೇಶ್ ಕುಮಾರ್ ಸೇರಿದಂತೆ ಅನೇಕ ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಬಡಾವಣೆಗಳಲ್ಲಿ ಹೆಂಗಸರು, ಮಕ್ಕಳು, ವಯಸ್ಸಾದವರು ಓಡಾಡುವುದೇ ಕಷ್ಟವಾಗಿದ್ದು, ಈ ನಾಯಿಗಳು ಬಹಳ ಜನಕ್ಕೆ ಕಚ್ಚಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ಪಡೆಯಲು ನಗರಸಭೆಯಿಂದ ಸೂಕ್ತ ಪರಿಹಾರ ಧನ ನೀಡಬೇಕು, ಅಲ್ಲದೆ ಟೆಂಡರ್ ಗಾಗಿ ಕಾಯದೇ ಈ ನಾಯಿಗಳನ್ನು ಹಿಡಿದು, ಬೇರಡೆಗೆ ಸಾಗಿಸಬೇಕು ಎಂಬುದಾಗಿ ಸಭೆಯಲ್ಲಿ ಒತ್ತಾಯಿಸಿದರು.

ನಾಮನಿರ್ದೇಶನ ಸದಸ್ಯ ಅಜೀಂ, ಈರಲಿಂಗೇಗೌಡ ಮಾತನಾಡಿ, ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕಸ್ಮಿಕವಾಗಿ ರಾತ್ರಿ ಹೊತ್ತಿನಲ್ಲಿ ಯಾರಾದರೂ ರೋಗಿಗಳು ಹೋದರೆ ಯಾವ ವೈದ್ಯರೂ ಸಿಗುವುದಿಲ್ಲ, ರಾತ್ರಿ ವೇಳೆ ಡೂಟಿ ಡಾಕ್ಟರ್ ಗಳು ಕರ್ತವ್ಯದ ಕೊಠಡಿಯಲ್ಲಿ ಇರುವುದಿಲ್ಲ, ಅಲ್ಲದೆ ರೋಗಿಗಳನ್ನು ನಿಲ್ಲಿಸಿಕೊಂಡೇ ಇಂಜಕ್ಷನ್ ಕೊಡಲಾಗುತ್ತದೆ, ಅಲ್ಲದೆ ಆಸ್ಪತ್ರೆಗೆ ಹೋದವರನ್ನು ಚಿತ್ರದುರ್ಗಕ್ಕೆ ಕಳಿಸಲಾಗುತ್ತದೆ ಸಚಿವರ ಕ್ಷೇತ್ರದಲ್ಲಿಯೇ ಹೀಗಾದರೆ ಹೇಗೆ ಎಂಬುದಾಗಿ ಪ್ರಶ್ನಿಸಿದರು.

ಈ ವಿಚಾರಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ.ವಿಜಯ್ ಕುಮಾರ್ ಆಸ್ಪತ್ರೆಯ ಟೆರಸ್ ಮೇಲೆ ಸೋಲಾರ್ ಅಳವಡಿಸಲು ಕಂಪನಿಯವರು ಡ್ರಿಲ್ಲಿಂಗ್ ಮಾಡಿರುವುದರಿಂದ ಮಳೆಗಾಲದಲ್ಲಿ ಅಲ್ಲಲ್ಲಿ ಸೋರಿಕೆ ಉಂಟಾಗಿ ಐಸಿಯುನಲ್ಲಿ ಕರೆಂಟ್ ಉಪಕರಣಗಳು ಇರುವುದರಿಂದ ಗ್ರೌಂಡ್ ಆಗಬಹುದೆಂಬ ಉದ್ದೇಶದಿಂದ ರೋಗಿಗಳನ್ನು ಐಸಿಯುಗೆ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿಲ್ಲ, ನಮಗಿಂತ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯವಿರುವುದರಿಂದ ಅಲ್ಲಿಗೆ ಕಳುಹಿಸಲಾಗುತ್ತದೆಯಷ್ಟೇ ಎಂದು ಸಮಜಾಯಿಸಿ ಹೇಳಿದರು.

ನಗರದ ನೆಹರು ಮೈದಾನದಲ್ಲಿರುವ ರೋಟರಿ ಕ್ಲಬ್ ಹಾಗೂ ರೋಟರಿ ಸಭಾಂಗಣ ಇರುವ ಸ್ವತ್ತನ್ನು ನಗರಸಭೆಗೆ ಸ್ವಾದೀನಪಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ವಿಚಾರ ಮಂಡಿಸಿದಾಗ ನಡೆದ ಚರ್ಚೆಯಲ್ಲಿ ಮಾಜಿ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನದ ಆವರಣದಲ್ಲಿರುವ ರೋಟರಿ ಕ್ಲಬ್, ರೋಟರಿ ಸಭಾಂಗಣ, ಎಲ್ಲಾ ನಗರಸಭೆಯ ಜಾಗವಾಗಿದ್ದು, ಆದರೆ ರೋಟರಿಯವರು ನಗರಸಭೆಯಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿಕೊಂಡು ಬೇರೆಕಾರ್ಯಕ್ರಮಗಳಿಗೆ ಬಾಡಿಗೆ ಕೊಟ್ಟು ಆದಾಯ ಗಳಿಸುತ್ತಿದ್ದಾರೆ. ಆದ್ದರಿಂದ ಈ ಸ್ವತ್ತನ್ನು ನಗರಸಭೆಗೆ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂಬುದಾಗಿ ಒತ್ತಾಯಿಸಿದರು.

ಅಂತಿಮವಾಗಿ ಎಲ್ಲಾ ಸದಸ್ಯರು ಈ ವಿಚಾರವನ್ನು ಬೆಂಬಲಿಸಿ, ಈ ಸ್ವತ್ತನ್ನು ನಗರಸಭೆ ವಶಪಡಿಸಿಕೊಳ್ಳಬೇಕು, ಅಲ್ಲಿ ಯಾವುದೇ ಕಾರ್ಯಕ್ರಮ ನಡೆಸುವ ಸಾರ್ವಜನಿಕರು ನಗರಸಭೆಗೆ ಬಾಡಿಗೆ ಕಟ್ಟಿ ತಮ್ಮ ಕಾರ್ಯಕ್ರಮ ನಡೆಸಬೇಕು ಎಂಬುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಈ ನಿರ್ಣಯವನ್ನು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು.

ಈ ಸಭೆಯ ಅಧ್ಯಕ್ಷತೆಯನ್ನು ಬಾಲಕೃಷ್ಣ ವಹಿಸಿದ್ದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ.ಡಿ.ಸಣ್ಣಪ್ಪ, ವಿಠ್ಠಲ್ ಪಾಂಡುರಂಗ, ಶ್ರೀಮತಿ ರತ್ನಮ್ಮ, ಶ್ರೀಮತಿ ಮಮತಾ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕಿ ಶ್ರೀಮತಿ ಮಂಜುಳಾ, ಲೆಕ್ಕ ಅಧೀಕ್ಷಕರಾದ ಗೋವಿಂದರಾಜು, ಲೆಕ್ಕಾಧಿಕಾರಿ ಜನಾರ್ಧನ್, ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂದ್ಯಾ ಹಾಗೂ ಸುನೀಲ್, ಸೇರಿದಂತೆ ನಗರಸಭೆ ಕಚೇರಿ ಅಧಿಕಾರಿಗಳು, ಎಂಜಿನಿಯರ್ ಗಳು, ನಗರಸಭೆ ಎಲ್ಲಾ ಸದಸ್ಯರುಗಳು, ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *