
ಹಿರಿಯೂರು:
ನ್ಯಾಯ, ಸಮಾನತೆ, ಮನುಷ್ಯತ್ವ, ಬದುಕಿನ ಘನತೆ, ಸರಳ ಜೀವನ, ಕುಟುಂಬ ಸಂಬಂಧ, ಉತ್ತಮ ಪರಿಸರ ಜೀವನಕ್ಕೆ ಪ್ರವಾದಿ ಮಹಮ್ಮದ್ ಅವರ ಮಾರ್ಗದರ್ಶನ ಮನುಷ್ಯನ ಬೆಳಕಿನ ಸಂಕೇತವಾಗಿದೆ ಎಂಬುದಾಗಿ ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಹೇಳಿದರು.
ನಗರದ ನೆಹರು ಮೈದಾನದಲ್ಲಿ ಜಮಾತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಪ್ರವಾದಿ ಮಹಮ್ಮದ್ ಎಲ್ಲರಿಗಾಗಿ” ಎಂಬ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನ ಉದಯ ಮನುಷ್ಯನ ಬೆನ್ನಿನ ಮೂಳೆಯ ಮೂಲಕ ಬರುವ ಹನಿಯ ಮೂಲಕ ಆಗುತ್ತದೆ. ಆದರೆ ಶಾಶ್ವತವಲ್ಲ. ಮನುಷ್ಯ ಹೊಣೆಗಾರಿಕೆಗಳಿಂದ ಹಿಂದೆ ಸರಿಯುತ್ತಿದ್ದಾನೆ. ಮೌಲ್ಯಾಧಾರಿತ ಜೀವನದ ಮೂಲಕ ಬದುಕುವ ಅಧಿಕಾರದ ಹಕ್ಕನ್ನು ಪ್ರತಿಯೊಬ್ಬರಿಗೂ ಅಲ್ಲಾಹನ ಆಜ್ಞೆಯ ಅನುಸಾರ ಪ್ರವಾದಿಯವರ ಮಂಡಿಸಿದ್ದಾರೆ. ಎಂದರಲ್ಲದೆ,
ಮೇಲು-ಕೀಳು ಭಾವನೆಗಳನ್ನು ತೊರೆದು ಮನುಷ್ಯರನ್ನು ಮನುಷ್ಯರೊಂದಿಗೆ ಜೋಡಿಸುವ ಕೆಲಸವನ್ನು ಧರ್ಮ ಬೇರ್ಪಡಿಸುವುದನ್ನು ಅಧರ್ಮ ಎಂದಿದ್ದಾರೆ. ಸರ್ವಧರ್ಮಿಯರೊಂದಿಗೆ ಪರಸ್ಪರ ಗೌರವ, ಪ್ರೀತಿಯ, ಸಮತೆಯನ್ನು ಕುರಾನ್ ಬೋಧಿಸಿದ ಪ್ರಸ್ತುತ ಕಲಿಕೆಯಲ್ಲಿ ಗ್ರಹಿಕೆಯ ಸಾಮಾರ್ಥ್ಯ ಮತ್ತು ಸ್ವೀಕರಿಸುವ ಮನಃಸ್ಥಿತಿ ಬಹಳ ನಿರ್ಣಾಯಕವಾಗಬೇಕಿದೆ.

ಪ್ರವಾದಿಯವರು ಬದುಕಿದ್ದ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಎಲ್ಲಾ ಸಮುದಾಯದ ಶಕ್ತಿ ಮತ್ತು ಶಕ್ತಿಗಳೊಂದಿಗೂ ಸೌಹಾರ್ದ ಸಾಧಿಸಿ ಲೋಕಕ್ಕೆ ಮಾದರಿಯಾಗಿದ್ದಾರೆ ಎಂಬುದಾಗಿ ಅವರು ಹೇಳಿದರು.
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವಕುಮಾರಸ್ವಾಮೀಜಿ ಅವರು ಮಾತನಾಡಿ ಪ್ರವಾದಿಯವರು ಜಾತಿಯ ಸ್ವತ್ತಲ್ಲ. ಬದಲಾಗಿ ಸಿದ್ಧಾಂತಗಳ ಸ್ವತ್ತು ಆಗಿದ್ದಾರೆ. ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಇದ್ದು ಆಯಾ ಧರ್ಮದ ಪ್ರತಿಪಾದಕರು ಮೌಲ್ಯಯುತ ಮಾತುಗಳನ್ನು ಹೇಳಿದ್ದಾರೆ. ಅವುಗಳ ಪ್ರಾಮಾಣಿಕ ಅನುಕರಣೆ, ಪಾಲನೆ ನಮ್ಮದಾಗಬೇಕಿದೆ ಎಂದರಲ್ಲದೆ,

ಭಾವೈಕ್ಯತೆ, ಸೌಹಾರ್ದತೆಗೆ ಪ್ರಜ್ಞಾವಂತರ ಕೂಡುವಿಕೆ ಅವಶ್ಯಕ. ಬಸವಣ್ಣನವರ ವಚನಗಳಂತೆ ಪ್ರವಾದಿ ಮಹಮ್ಮದ್ ರವರ ದಿವ್ಯವಾಣಿಗಳು ಕೂಡ ಪ್ರಪಂಚದಲ್ಲಿ ಐತಿಹಾಸಿಕ ಹೆಜ್ಜೆಗಳನ್ನು ಹೊಂದಿವೆ. ಯಾವುದೇ ಧರ್ಮದವರಾದರೂ ಇತರೆ ಧರ್ಮಗಳ ಸಾಮ್ಯತೆ, ಅಂತರಾಳಗಳನ್ನು ಅರ್ಥೈಸಿಕೊಳ್ಳಬೇಕು. ಮಾನವೀಯತೆ ಮತ್ತು ಪ್ರೀತಿಗಿಂತ ಮಿಗಿಲಾದ ಧರ್ಮವಿಲ್ಲ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಹಾಫೀಜ್ ಸಿಗಬತ್ ಉಲ್ಲಾ, ಜಮಾತೆ ಇಸ್ಲಾಮೀ ಹಿಂದ, ಜಿಲ್ಲಾ ಸಂಯೋಜಕ ಮುಕರಮ್ ಸಯೀದ್, ಹೈದರ್ ಅಲಿ, ಅಮೀಮ್ ಅಹಮ್ಮದ್, ಮುನೀರ್, ಮುಲ್ಲಾ, ಅಸ್ಗರ್ ಅಹಮ್ಮದ್, ನೂರುಲ್ಲಾ, ಚಮನ್ ಷರೀಪ್, ಅಬ್ದುಲ್ ಗಫಾರ್, ನೌಷಾದ್, ಅಯೂಬ್, ನವೀದ್, ಜಬೀವುಲ್ಲಾ, ಅಲ್ತಾಫ್, ಅಹಮ್ಮದ್, ಫ್ರಕೃದ್ಧೀನ್, ಸಿರಾಜ್ ಅಹಮ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

