
ಹಿರಿಯೂರು:
ಈ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಅಡಿಯಲ್ಲಿ ನಾವು-ನೀವೆಲ್ಲರೂ ಬದುಕುತ್ತಿದ್ದೇವೆ, ಅಂಬೇಡ್ಕರ್ ರವರ ತತ್ವಗಳನ್ನು ಆದರ್ಶವಾಗಿ ಇಟ್ಟುಕೊಂಡು ಸ್ಥಾಪನೆಯಾದ ಮಾನವ ಬಂಧುತ್ವ ವೇದಿಕೆ ಸುಮಾರು ವರ್ಷಗಳಿಂದ ಮೌಡ್ಯ ವಿರೋಧಿ ಅಭಿಯಾನ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ ಎಂಬುದಾಗಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕರಾದ ಹೆಚ್.ಎಸ್. ಮಾರುತೇಶ ಕೂನೀಕೆರೆ ಹೇಳಿದರು.
ತಾಲ್ಲೂಕಿನ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ತಾಲ್ಲೂಕಿನ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರ ಚಿಂತಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದಂದು ಮೌಢ್ಯ ವಿರೋಧಿ ಪರಿವರ್ತನಾ ದಿನ ವೈಚಾರಿಕ ಬೆಳಕಿನೆಡೆಗೆ ಸಾಗೋಣ ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಸಾರುತ್ತಾ ಪ್ರತಿ ಹಳ್ಳಿಹಳ್ಳಿಗಳಲ್ಲೂ ಅಜ್ಞಾನ, ಅಂಧಕಾರ ಹಾಗೂ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿ ಜನರನ್ನು ಹೊಸ ಬದುಕಿನೆಡೆಗೆ ಕೊಂಡ್ಯೊಯ್ಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಮ್ಮ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟಗಳು ಮಾಡುತ್ತಾ ಬಂದಿವೆ ಎಂಬುದಾಗಿ ಅವರು ಹೇಳಿದರು.
ದಲಿತ ಮುಖಂಡ ಕೆ.ಪಿ.ಶ್ರೀನಿವಾಸ್ ರವರು ಮಾತನಾಡಿ, ಇದು ಒಂದು ಹೊಸ ವಿಶೇಷ ಕಾರ್ಯಕ್ರಮ ಸ್ಮಶಾನದಲ್ಲಿ ಸಾಮೂಹಿಕ ಭೋಜನ ಹಾಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಈ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಚೆನ್ನಾಗಿದೆ, ಹಳ್ಳಿಗಳಲ್ಲಿ ಎಸ್.ಸಿ. ಎಸ್.ಟಿ. ಶೋಷಿತ ತಳಸಮುದಾಯದ ಜನರು ಮಾರಮ್ಮ, ದುರ್ಗಾಮ್ಮ ಎಂದು ಸಾಲ ಮಾಡಿ, ಹಬ್ಬ ಮಾಡಿ, ಕಾಲಕಳೆಯುವ ಬದಲಾಗಿ ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಜಿಲ್ಲಾಧಿಕಾರಿಗಳು ಆಗಲಿ ಎಂಬ ಮನೋಭಾವನೆ ಬೆಳೆಯಬೇಕು ಎಂಬುದಾಗಿ ಅವರು ಹೇಳಿದರು.
ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ತಿಮ್ಮರಾಜು ಮಾತನಾಡಿ, ಶಿಕ್ಷಣ ಪಡೆದಾಗ ಸಂಘಟನೆ ಮಾಡುವ ಬಹುದೊಡ್ಡ ಶಕ್ತಿ ಬರುತ್ತದೆ. ಮೌಡ್ಯ ಆಚರಣೆ ಯುವಕರಲ್ಲಿ ಹೆಚ್ಚು ಹೆಚ್ಚು ಯುವಕರು ದಾಸರಾಗುತ್ತಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ದಲಿತ ಪರ ಸಂಘಟನೆಯ ಸಂಪೂರ್ಣ ಸಹಕಾರ ಮಾನವ ಬಂಧುತ್ವ ವೇದಿಕೆ ಗೆ ಸದಾ ನಿಮ್ಮ ಕಾರ್ಯ ಚಟುವಟಿಕೆಗಳಲ್ಲಿ ನಾವು ನಿಮ್ಮ ಜೊತೆ ಜೊತೆಗೆ ಇರುವುದಾಗಿ ಅವರು ಹೇಳಿದರು.
ಮುಖಂಡರಾದ ಘಾಟ್ ರವಿ ರವರು ಮಾತನಾಡಿ, ಈ ದಿನ ನಾವು ಈ ಹರಿಶ್ಚಂದ್ರ ಘಾಟ್ ರುದ್ರ ಭೂಮಿಯಲ್ಲಿ ಕಾರ್ಯಕ್ರಮ ಮಾಡಲು ಅಂದು ನಾವು ಮಾಡಿದ ಹೋರಾಟವೇ ಕಾರಣ. ನಮಗೆ ಹೆಣ ಹೂಳಲು ಸಹ ಜಾಗ ಇಲ್ಲ. ನಮ್ಮ ಹೋರಾಟ ಮಾಡುವ ಮೂಲಕ ಅಂದು ನಾವು ರುದ್ರಭೂಮಿ ಪಡೆಯಲು ಸಾಧ್ಯವಾಗಿತ್ತು ಎಂಬುದಾಗಿ ಸ್ವರಿಸಿದರು.
ರೈತ ಸಂಘದ ಅಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಅವರು ಮಾತನಾಡಿ, ಮೌಡ್ಯ ಆಚರಣೆ ಮಾಡಬಾರದು. ದೆವ್ವ, ಭೂತ ಪ್ರೇತಪಿಶಾಚಿ ಎಲ್ಲೂ ಇಲ್ಲ ನಮ್ಮ ಮನಸಿನ ಭಾವನೆ ಬದಲಾವಣೆ ಮಾಡಿಕೊಳ್ಳಬೇಕಿದೆ, ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮಕ್ಕೆ ಸದಾ ನಿಮಗೆ ನಮ್ಮ ಸಹಕಾರ ಇದೆ ಎಂಬುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸ್ಮಶಾನ ರುದ್ರ ಭೂಮಿಯಲ್ಲಿ ಸಾಮೂಹಿಕ ಭೋಜನ ಮಾಡುವುದರ ಜೊತೆಗೆ ಮೌಡ್ಯ ವಿರೋಧಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾಂತೇಶ್ ಗಾಂಧಿನಗರ, ಶ್ರೀಧರ್ ಘಾಟ್, ಮಂಜುನಾಥ್ ಘಾಟ್, ಸಿದ್ಧಾರ್ಥ, ಧರ್ಮಪುರರಂಗಸ್ವಾಮಿ, ಪುಟ್ಟಪ್ಪ ಕೂನಿಕೆರೆ, ಹುಚ್ಚವನಹಳ್ಳಿ ರಂಗಸ್ವಾಮಿ, ಶಹಜಾನ್, ಕಣಜನಹಳ್ಳಿ ದುಶಾಂತ್, ರಮೇಶ್ ಬೆಳ್ಳಿ, ರಂಗನಾಥ್ ಸೋಮರಹಳ್ಳಿ, ಲಕ್ಕೇನಹಳ್ಳಿ ಮಂಜುನಾಥ್ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
