March 2, 2026
000001

ಹಿರಿಯೂರು :          

ಡಾ.ಬಿ.ಆರ್.ಅಂಬೇಡ್ಕರ್ ರವರು ಈ ನಾಡು ಕಂಡಂತ ಧೀಮಂತನಾಯಕ, ದಲಿತರು, ಹಿಂದುಳಿದವರು, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೋರಾಡಿದ ಮಹಾನಾಯಕ, ಇವರ ಜೀವನ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.  

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅಂಬೇಡ್ಕರ್ ಪರಿನಿರ್ವಾಣ ದಿನ” ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.  

ಡಾ.ಬಿ.ಆರ್.ಅಂಬೇಡ್ಕರ್ ರವರು ನೂರಾರು ದೇಶಗಳ ಸಂವಿಧಾನವನ್ನು, ಅನೇಕ ದೇಶಗಳ ನೂರಾರು ಗ್ರಂಥಗಳನ್ನು ಓದಿ, ಆ ಗ್ರಂಥಗಳಲ್ಲಿರುವ ಉತ್ತಮ ಅಂಶಗಳನ್ನು ಆಯ್ದುಕೊಂಡು ಭಾರತ ದೇಶದ ಸಂವಿಧಾನದಲ್ಲಿ ಅಳವಡಿಸುವ ಮೂಲಕ ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಬೃಹತ್ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ಕೊಡುಗೆಯಾಗಿ ನೀಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ದಲಿತ ಸಮುದಾಯದಲ್ಲಿ ಹುಟ್ಟಿ, ನೂರಾರು ನಿಂದನೆ, ಅವಮಾನ ಹಾಗೂ ಸಂಕಷ್ಟಗಳನ್ನು ಅನುಭವಿಸಿದರೂ ಸಹ ನಿಷ್ಠೆಯಿಂದ ಹಗಲಿರುಳು ಅಭ್ಯಾಸ ಮಾಡುವ ಮೂಲಕ ದೇಶವಿದೇಶಗಳಿಗೆ ಹೋಗಿ ಉನ್ನತ ಪದವಿಯನ್ನು ಪಡೆದು, ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ಇವರ ಹೋರಾಟ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂಬುದಾಗಿ ಹೇಳಿದರು.

ಉಪನ್ಯಾಸಕ ಉಮೇಶ್ ಯಾದವ್ ಮಾತನಾಡಿ, ಇಡೀ ವಿಶ್ವದ ಮೆಚ್ಚುಗೆಯನ್ನು ಪಡೆದ ವೈವಿಧ್ಯಮಯ ಸಂಸ್ಕೃತಿ ಹೊಂದಿದ ಭಾರತದ ಸಂವಿಧಾನ ಎಲ್ಲ ಜನರ ಹಕ್ಕು ಬಾಧ್ಯತೆಗಳನ್ನು ಸಂರಕ್ಷಿಸುತ್ತಿರುವ ಕಾವಲುಗಾರನಿದ್ದಂತೆ, ಇಂತಹ ಶ್ರೇಷ್ಠ ಸಂವಿಧಾನವು ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶಕ್ಕೆ ನೀಡಿದ ಕೊಡುಗೆಯಾಗಿದೆ, ಇವರ ಕೊಡುಗೆ ಅವಿಸ್ಮರಣೀಯ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕರಾದ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶಿಕ್ಷಕಿಯರುಗಳಾದ ಸಬೀಹಾ, ಪೂಜಾ, ಶಿವರಾಜ್ ನಾಯಕ ಸೇರಿದಂತೆ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *