March 2, 2026
0001

ಹಿರಿಯೂರು:

ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150-ಎ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆ ಕಾಮಗಾರಿಯನ್ನೂ ಕೂಡಲೇ ಪೂರ್ಣಗೊಳಿಸುವಂತೆ  ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು  ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ವಿಕಾಸಸೌಧ ಕಚೇರಿಯಲ್ಲಿ ಶುಕ್ರವಾರ ಹಿರಿಯೂರು-ಚಳ್ಳಕೆರೆ ತಾಲ್ಲೂಕಿನಲ್ಲಿ ಹಾದುಹೋಗಿರುವ  ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150-ಎ ಕಾಮಗಾರಿ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದೊಂದು ವರ್ಷದಿಂದ ವಾಹನಗಳ ಓಡಾಟ ಆರಂಭವಾಗಿದೆ. ಆದರೆ, ಯರಬಳ್ಳಿ ಗ್ರಾಮ ಬಳಿ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿದ್ದು, ಗ್ರಾಮಸ್ಥರು ರಸ್ತೆ ದಾಟುವಾಗ ಅಪಘಾತಗಳಾಗುತ್ತಿವೆ. ಹಿರಿಯೂರಿನ ಬೈಪಾಸ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಹೊಸ ರಾಷ್ಟ್ರೀಯ ಹೆದ್ದಾರಿ 150-ಎ ಹಾದುಹೋಗಿದೆ. ಹುಳಿಯಾರು ಕಡೆಯಿಂದ ಬರುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ  ಬೆಂಗಳೂರು ಕಡೆಗೆ  ಹೋಗಲು ಮಾರ್ಗ ಗೊತ್ತಾಗದೆ ದಾರಿ ತಪ್ಪುತ್ತಿರುವ ಬಗ್ಗೆ  ದೂರುಗಳಿವೆ ಎಂಬುದಾಗಿ ಅವರು ಹೇಳಿದರು.

ಚಳ್ಳಕೆರೆ ಕಡೆಯಿಂದ  ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸೇರಲು ಸರ್ವೀಸ್  ರಸ್ತೆಯು ಸಹ ಬಹಳ ಚಿಕ್ಕದಾಗಿದ್ದು, ವಾಹನ ದಟ್ಟಣೆ ಉಂಟಾಗುತ್ತದೆ.  ಬೆಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ48ರಿಂದ ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ 150-ಎ ಸೇರಲು  ಸರಿಯಾದ ಮಾರ್ಗ  ನಿರ್ಮಾಣ ಮಾಡದೇ ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

ಬೆಂಗಳೂರು ಕಡೆಯಿಂದ ಹಿರಿಯೂರು ನಗರದ ಒಳಗೆ ಹೋಗುವ ರಸ್ತೆಯ ಭಾಗದಲ್ಲಿ ಲಾರಿಗಳು ನಿಂತು ದಾರಿ ಕಾಣದಂತಾಗಿದೆ. ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ. ಈ ವರ್ಷ ಇಲ್ಲಿ 8 ಜನ ಸಾವಿಗೀಡಾಗಿದ್ದಾರೆ.  ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬುದಾಗಿ ಅವರು ಅಸಮಧಾನ ವ್ಯಕ್ತಪಡಿಸಿದರು.

ಕೆ.ಆರ್.ಹಳ್ಳಿ ಮತ್ತು ಗೊರ್ಲಡಕು ಬಳಿ ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿದೆ. ಇಲ್ಲಿ ಎರಡೂ ಬದಿಯ ಸರ್ವೀಸ್ ರಸ್ತೆಗಳು ಹಾಳಾಗಿವೆ. ರಾತ್ರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಕೂಡಲೇ ಸದರಿ ಸ್ಥಳಗಳ ಸೇತುವೆ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಬೇಕು.  ಸರ್ವೀಸ್ ರಸ್ತೆ  ಮರುಡಾಂಬರೀಕರಣ ಮಾಡಬೇಕು ಎಂಬುದಾಗಿ ನಿರ್ದೇಶಿಸಿದರು.

ರಾಷ್ಟ್ರೀಯ ಹೆದ್ದಾರಿ48ರ ಗಿಡ್ಡೋಬನಹಳ್ಳಿ ಗ್ರಾಮ ಬಳಿ, ಹುಲಗಲಕುಂಟೆಯಿಂದ ಸೋಮೇರಹಳ್ಳಿಗೆ  ಹೋಗುವ ರಾಷ್ಟ್ರೀಯ ಹೆದ್ದಾರಿ150-ಎ ರಲ್ಲಿ ರಾಷ್ಟ್ರೀಯ ಹೆದ್ದಾರಿ48ರ ಬಬ್ಬೂರು ಗ್ರಾಮದ  ಎ.ಪಿ.ಎಂ.ಸಿ. ಹತ್ತಿರ  ಹೊಸದಾಗಿ ಅಂಡರ್ ಪಾಸ್ ನಿರ್ಮಾಣದ ಅವಶ್ಯಕತೆಯಿದೆ.

ಈ ಕುರಿತು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ ಹಿರಿಯ ಅಧಿಕಾರಿಗಳು  ಸ್ಥಳ ಪರಿಶೀಲನೆ ನಡೆಸಬೇಕು. ಈ ವೇಳೆ ಚಳ್ಳಕೆರೆ  ಶಾಸಕರ ಜತೆಗೆ ತಾವು ಹಾಜರಿರುವುದಾಗಿ  ಸುಧಾಕರ್ ಅವರು ಹೇಳಿದರು.

ಲೋಕೋಪಯೋಗಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತರಾದ  ಆಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಬೆಂಗಳೂರಿನಿಂದ ಬರುವಾಗ ತಮಗೆ  ಬಳ್ಳಾರಿ ಕಡೆಗೆ ದಾರಿ ಗೊತ್ತಾಗದೆ ಪರದಾಡುವಂತಾಗಿದೆ. ಎಂದರಲ್ಲದೆ, 

ಹೈವೆಯಲ್ಲಿ ಲಾರಿಗಳಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 48 ಹಾಗೂ 150 ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಎರಡು ಡಯೋಗ್ನಲ್ ಸೆಮಿ ಕ್ಲೋವರ್ ಗಳನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂಬುದಾಗಿ ಅವರು ಹೇಳಿದರು.ಹೆದ್ದಾರಿ ಪ್ರಾಧಿಕಾರದ  ಅಧಿಕಾರಿಗಳು  ಯೋಜನಾ ವರದಿ ತಯಾರಿಸುವಂತೆ ಹಾಗೂ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ಪ್ರಾದೇಶಿಕ ಅಧಿಕಾರಿ   ವಿಲಾಸ್ ಪಿ.ಬ್ರಹ್ಮಾಶಂಕರ್ ಅವರು ಮಾತನಾಡಿದರು. ಈ  ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ, ಜಿಲ್ಲಾದಿಕಾರಿ ಟಿ.ವೆಂಕಟೇಶ್, ಶಿರಿಶ್ ಗಂಗಾಧರ್, ವೆಂಕಟೇಶ್ ನಾಯ್ಕ್, ಡಿ.ವೈ.ಎಸ್.ಪಿ. ಶಿವಕುಮಾರ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಅಮೇತೇಶ್ವರಸ್ವಾಮಿ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *