
ಹಿರಿಯೂರು :
ತಾರುಣ್ಯಾವಸ್ಥೆಯಲ್ಲಿ ಹೆಣ್ಣು ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಸೊಪ್ಪು, ತರಕಾರಿ, ಹಣ್ಣುಗಳು, ಮೊಟ್ಟೆಗಳು, ಮೊಳಕೆ ಕಾಳುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡಬೇಕು ಎಂಬುದಾಗಿ ಸಂಜೀವಿನಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ.ಲತಾ ರಾಮಚಂದ್ರಪ್ಪ ಹೇಳಿದರು.
ನಗರದ ಮೋಕ್ಷಗೊಂಡ ವಿಶ್ವೇಶ್ವರಯ್ಯ ವಿದ್ಯಾಮಂದಿರದ ಶಾಲೆಯಲ್ಲಿ ತಾರುಣ್ಯಾವಸ್ಥೆ ಹೆಣ್ಣು ಮಕ್ಕಳ ಆರೋಗ್ಯದ ಜಾಗೃತಿ ಕುರಿತು ಆರನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿ, ನಂತರ ಅವರು ಮಾತನಾಡಿದರು.

ಮಕ್ಕಳು ಹೊರಗಿನ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು, ಹೊರಗಿನ ಆಹಾರ ತೂಕವನ್ನು ಹೆಚ್ಚು ಮಾಡುತ್ತದೆ, ಹೆಣ್ಣುಮಕ್ಕಳು ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದಿರಬೇಕು ಎಂದರಲ್ಲದೆ, ಅನಿಮಿಯ ಹಿಮೋಗ್ಲೋಬಿನ್ ಗರ್ಭಕೋಶದ ಕ್ಯಾನ್ಸರ್, ಎಚ್.ಐ.ವಿ ವ್ಯಾಕ್ಸಿನ್, ಋತುಚಕ್ರದ ಸಮಯದಲ್ಲಿ ಬಳಸುವ ಸಾಧನಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಎಂ.ಬಸವರಾಜಪ್ಪ, ಉಪಾಧ್ಯಕ್ಷರಾದ ಕೆ.ಆರ್.ವೀರಭದ್ರಯ್ಯ, ಕಾರ್ಯದರ್ಶಿ ಹೆಚ್.ಎಂ.ಬಸವರಾಜ್, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ದೇವರಾಜ್, ರವಿಪ್ರಸಾದ್, ಸೂರ್ಯಪ್ರಕಾಶ್, ಹರ್ಷ ದರೇಧರ್, ಮುಖ್ಯ ಶಿಕ್ಷಕರಾದ ಜಿ.ತಿಪ್ಪೇಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.
