October 6, 2025
00001

ಹಿರಿಯೂರು:

ಸಮಾಜದಲ್ಲಿ ಹಿಂದೂಗಳನ್ನು ರಕ್ಷಿಸುವ ಹಾಗೂ ಮತಾಂಧ ಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳು ಒಂದಾಗಬೇಕಿದೆ ಎಂಬುದಾಗಿ  ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಯೋಜಕರಾದ ಪ್ರಭಂಜನ್ ಅವರು ಹೇಳಿದರು.

ನಗರದ ಬಿ.ಇ.ಒ.ವೃತ್ತದ ಸಿಂಧೂರ ವೇದಿಕೆಯಲ್ಲಿ ನಡೆದ  ಹಿಂದೂ ಮಹಾಗಣಪತಿ ವಿಸರ್ಜನೆ  ಮೆರವಣಿಗೆ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣವನ್ನು ಮಾಡಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಹಿಂದೂಗಳನ್ನು ಒಂದುಗೂಡಿಸಲು ಮನೆಯಲ್ಲಿದ್ದ ಗಣೇಶನನ್ನು ಹೊರಗಡೆ ತಂದು ಆಚರಿಸುವ  ಪದ್ಧತಿ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶುರುವಾಯಿತು. ಆಗ ಬ್ರಿಟೀಷರ ವಿರುದ‍್ದ ಹೋರಾಡಲು ಹಿಂದೂಗಳು ಒಂದಾಗಿದ್ದರು.

ಗಣೇಶನ ಮೆರವಣಿಗೆಯಲ್ಲಿ ಡಿ.ಜೆ. ನಿಷೇಧ ಮಾಡುವುದು, ಮೆರವಣಿಗೆಗೆ ಕರಾರು ಹಾಕುವುದು  ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು  ಹತ್ತಿಕ್ಕುವ  ಕೆಲಸ  ಮಾಡುತ್ತಿದೆ.  ಕೇವಲ ಮತ ಗಳಿಕೆಗಾಗಿ  ಗಣೇಶೋತ್ಸವದ ಮೇಲೆ ಸರ್ಕಾರ ಬ್ರಹ್ಮಾಸ್ತ್ರ  ಪ್ರಯೋಗಿಸುವುದು ಬೇಡ ಎಂಬುದಾಗಿ  ಅವರು ಎಚ್ಚರಿಸಿದರು.

ಗಣಪತಿಹಬ್ಬ ಬಂದರೆ ಕೆಲವರಿಗೆ ಭಯ ಶುರುವಾಗುತ್ತದೆ. ಹಿರಿಯೂರಿನ ಗಣೇಶೋತ್ಸವ ಒಂದು ದಿನದ ಮೆರವಣಿಗೆಗೆ ಸೀಮಿತವಾಗಬಾರದು. ಯುವ ಪೀಳಿಗೆಯು ಗಣೇಶೋತ್ಸವದ  ಮೂಲಕ ಒಂದಾಗಬೇಕಿದೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳಿಗೆ ಕಲ್ಲು ಬೀಳುವ ಸಂಭವವಿದ್ದು, ಈ ಬಗ್ಗೆ ಹಿಂದೂಗಳು ಎಚ್ಚರಿಕೆ ವಹಿಸಬೇಕು.

ನಾವು ಶಾಂತಿಪ್ರಿಯರು, ಆದರೆ ಹಿಂದೂ ಸಮಾಜ ವಿರಾಟಹನುಮನ ರೂಪ ಪಡೆಯುವ ಕಾಲ ಬರುವಂತೆ  ಎಂದೂ ಯಾರು ಮಾಡಬಾರದು ಎಂಬುದಾಗಿ ಅವರು ಹೇಳಿದರು.

ನಗರದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ  ಹಿಂದೂ ಮಹಾಗಣಪತಿಯನ್ನು  ಅಲಂಕರಿಸಿದ ಟ್ರ್ಯಾಕ್ಟರ್ ನಲ್ಲಿ ಕೂರಿಸಿ ಭವ್ಯ ಮೆರವಣಿಗೆಯ ಮೂಲಕ ಶಂಕರಮಠದಿಂದ ಮುಖ್ಯರಸ್ತೆಗೆ  ಕರೆತರಲಾಯಿತು.

ಬಿ.ಇ.ಓ.ಕಚೇರಿ ಮುಂಭಾಗ ವೇದಿಕೆ ಮುಂಭಾಗ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ 2ರವರೆಗೆ  ಆರಂಭವಾದ ಶೋಭಯಾತ್ರೆ ಗಾಂಧಿವೃತ್ತ, ಹುಳಿಯಾರು ರಸ್ತೆ, ಚರ್ಚ್ ರಸ್ತೆ, ಆಸ್ಪತ್ರೆರಸ್ತೆ ಮೂಲಕ ರಂಜಿತಾಹೋಟೆಲ್ ಮುಂಭಾಗದಿಂದ ಮತ್ತೆ ಗಾಂಧಿವೃತ್ತಕ್ಕೆ  ಸಂಜೆ ಬಂದಾಗ  ಟ್ರಸ್ ಮಾದರಿಯ ಲೇಸರ್ ಲೈಟಿಂಗ್ಸ್  ಮೂಲಕ ಜಗಮಗಿಸುವ ವಿದ್ಯುತ್ ದೀಪಗಳಿಂದ  ಗಣೇಶಮೂರ್ತಿ ಪ್ರಜ್ವಲಿಸುವಂತಹ ವ್ಯವಸ್ಥೆ ಮಾಡಲಾಗಿತ್ತು.

ಕೇಸರಿ ಶಾಲು ಹೊದ್ದ ಯುವಕರು ಮೆರವಣಿಗೆ ಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಯುದ್ದಕ್ಕೂ ಜೈ ಶ್ರೀರಾಮ್  ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

ಕೊನೆಗೆ ಬಬ್ಬೂರುಫಾರಂ ಬಳಿ ಇರುವ ತೋಟಗಾರಿಕಾ ಕಾಲೇಜು ಹಿಂಭಾಗದ  ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಸುಗಮವಾಗಿ ಸಾಗಲು ಪೊಲೀಸರು  ಸೂಕ್ತ  ಬಂದೋಬಸ್ತ್ ಒದಗಿಸಿದ್ದರು. ಪಟ್ಟಣದ  ಒಳಗಡೆ ಬೃಹತ್ ವಾಹನಗಳು ಬರುವುದನ್ನು  ನಿಷೇಧಿಸಲಾಗಿತ್ತು.

ಈ ಸಂದರ್ಭದಲ್ಲಿ  ಹಿಂದೂಮಹಾಗಣಪತಿ  ಸಮಿತಿ ಅಧ್ಯಕ್ಷರಾದ ಡಿ.ನಾರಾಯಣರೆಡ್ಡಿ, ಗೌರವಾಧ್ಯಕ್ಷ ಅಮರನಾಥ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರಶಾಂತ್, ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಾಜಿ  ಬಿ.ಬಿ.ಎಂ.ಪಿ.ಸದಸ್ಯ ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ಬಿ.ಜೆ.ಪಿ.ತಾಲ್ಲೂಕು ಅಧ್ಯಕ್ಷ ಅಭಿನಂದನ್, ಬಿ.ಜೆ.ಪಿ. ಹಿರಿಯ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹಾಲಪ್ಪ,  ಮಾಜಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ  ವಿಶ್ವನಾಥ್, ಎ.ರಾಘವೇಂದ್ರ,  ಎಂ.ಎಸ್.ರಾಘವೇಂದ್ರ, ಚೇತನ್, ಮಂಜುನಾಥೇಶ್ವರ, ನವೀನ್, ಪ್ರಮೋದ್, ವೆಂಕಟೇಶ್, ಎ.ಬಿ.ವಿ.ಪಿ.ಯೋಗೇಶ್ ಮತ್ತು ವಿಶ್ವ ಹಿಂದೂ ಪರಿಷತ್  ಹಾಗೂ ಬಜರಂಗದಳ  ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *