October 6, 2025
0003

ಹಿರಿಯೂರು:

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ  ಕಂಟ್ರೋಲರ್  ಶ್ರೀಮತಿ ನೇತ್ರಾವತಿ ಅವರು ದಿಂಡಾವರ ಹಾಗೂ ಪಿಲಾಲಿ ಮಾರ್ಗದ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ  ಗೂಂಡಾ ವರ್ತನೆಯನ್ನು ಮಾಡಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಹೆಚ್. ಲೋಕಮ್ಮ  ಹಾಗೂ ಕಾರ್ಯದರ್ಶಿಗಳಾದ ಹೆಚ್. ಮಹಾಸ್ವಾಮಿ  ಇವರುಗಳು    ಆರೋಪಿಸಿದ್ದಾರೆ.

ನಗರದ ಬಸ್ ನಿಲ್ದಾಣದಿಂದ ದಿಂಡಾವರ-ಗೌಡನಹಳ್ಳಿ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಶಾಲಾ ಸಮಯದಲ್ಲೇ ಬೆಳಗ್ಗೆ 9ಗಂಟೆಗೆ ಪ್ರತಿದಿನ ಸಂಚರಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಶಿಕ್ಷಕರಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಆ ಸಮಯದಲ್ಲಿ ದಿಂಡಾವರ-ಗೌಡನಹಳ್ಳಿ  ಕ್ಲಸ್ಟರ್ ನ ಶಿಕ್ಷಕ-ಶಿಕ್ಷಕಿಯರು ಹಿರಿಯೂರು ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ಶ್ರೀಮತಿ ನೇತ್ರಾವತಿ ಹಾಗೂ ಡ್ರೈವರ್ ಕಂಡಕ್ಟರ್ ಗಳಿಗೆ ಸನ್ಮಾನಿಸಿ, ಗೌರವಿಸಿದ್ದರು.

ಆದರೆ, ಪ್ರತಿದಿನ ಬೆಳಗ್ಗೆ 9ಗಂಟೆಗೆ  ಹೊರಡುತ್ತಿದ್ದ ಬಸ್ಸು ಬರಬರುತ್ತಾ 9.15, 9.20, 9.30 ಗಂಟೆಯಾದರೂ ಹೊರಡುತ್ತಿರಲಿಲ್ಲ. ಇದರಿಂದಾಗಿ ಸದರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 60 ಜನ ಶಿಕ್ಷಕರು ತಡವಾಗಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ  ನಿರ್ಮಾಣವಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಆದ್ದರಿಂದ ಕಂಟ್ರೋಲರ್ ನೇತ್ರಾವತಿಯವರನ್ನು ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ  ಶಿಕ್ಷಕ- ಶಿಕ್ಷಕಿಯರು ಕೇಳಲು ಹೋದಾಗ ನೀವು ಹೇಳಿದ ಟೈಂಗೆ  ಬಸ್ ಕಳಿಸಲು ಆಗುವುದಿಲ್ಲ.ಬಂದಾಗ ಹೋಗಿ ಎಂದು ಉಡಾಫೆ ಉತ್ತರ ನೀಡಿರುತ್ತಾರೆ.

ನಿಮಗೆ ಬಸ್ ಕಳಿಸಬೇಕೆಂಬ  ಯಾವುದೇ ನಿಯಮವಿಲ್ಲ. ಎಲ್ಲಾ ಶಿಕ್ಷಕರಿಗೆ ಹೆಚ್.ಆರ್.ಎ. ಬರುತ್ತದೆ. ನೀವು ಕೆಲಸ ಮಾಡುವ ಹಳ್ಳಿಗಳಲ್ಲಿ ಮನೆ ಮಾಡಿಕೊಂಡಿರಿ ಎಂದು ಹೇಳಿದರು.

ಈ ರೀತಿ ಮಾತನಾಡುವುದು ಸಮಂಜಸವಲ್ಲ ಸರಿಯಾಗಿ ಮಾತನಾಡಿ ಎಂದು ಶಿಕ್ಷಕರು ಕೇಳಿದ್ದಕ್ಕೆ,  ನಿಮಗೆ  ಸರ್ಕಾರಿ ಶಾಲೆಯಲ್ಲಿ ಪುಕ್ಕಟೆ  ಬಿಸಿಯೂಟ,  ಮೊಟ್ಟೆ,  ಬಾಳೆಹಣ್ಣು  ತಿಂದು ಕೊಬ್ಬು ಬಂದಿದೆ ಎಂದು ನಿಂದಿಸಿದರಲ್ಲದೆ,

ಶಿಕ್ಷಕ -ಶಿಕ್ಷಕಿಯರನ್ನು ಏಕವಚನದಲ್ಲಿ ಹೋಗ್ರಲೇ,  ಹೋಗ್ರಲೋ, ಎಂದು ಏರು ಧ್ವನಿಯಲ್ಲಿ ಕಿರುಚಾಡಿದರು. ಹೆಚ್ಚು ಮಾತನಾಡಿದರೆ ನಿಮಗೆಲ್ಲರಿಗೂ ಬಟ್ಟೆ ಬಿಚ್ಚಿ ಹೊಡೆಸುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ  ಶಿಕ್ಷಕರನ್ನು ಸಾರ್ವಜನಿಕ ಸ್ಥಳದಲ್ಲಿ  ನಿಂದಿಸಿ, ಅವಮಾನಿಸಿರುತ್ತಾರೆ.

ಆದ್ದರಿಂದ,  ಕಂಟ್ರೋಲರ್ ನೇತ್ರಾವತಿಯವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು  ಎಂಬದಾಗಿ ಕರ್ನಾಟಕ ರಾಜ್ಯ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಹೆಚ್. ಲೋಕಮ್ಮ ಹಾಗೂ ಕಾರ್ಯದರ್ಶಿಗಳಾದ ಮಹಾಸ್ವಾಮಿ  ಸೇರಿದಂತೆ ಅನೇಕ ಶಿಕ್ಷಕ- ಶಿಕ್ಷಕಿಯರು ಚಿತ್ರದುರ್ಗ ಜಿಲ್ಲಾ ಕೆ.ಎಸ್.ಆರ್.ಟಿ.ಸಿ. ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *