
ಹಿರಿಯೂರು :
ಭಾರತ ದೇಶದ ಪ್ರಜೆಗಳಾದ ನಾವು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾದ ನಮ್ಮ ದೇಶದ ಸಂವಿಧಾನವನ್ನು ಪ್ರೀತಿಸಿ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವ ಜೊತೆಗೆ ಸಂವಿಧಾನವನ್ನು ರಚಿಸುವ ಮೂಲಕ ಭಾರತ ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿದಿನವೂ ನಾವೆಲ್ಲರೂ ಸ್ಮರಿಸಬೇಕಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.
ನಗರದ ನಗರಸಭೆ ಕಚೇರಿಯಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಕಚೇರಿಯ ಎಲ್ಲಾ ಸಿಬ್ಬಂದಿವರ್ಗದವರಿಗೆ ಸಂವಿಧಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿ, ನಂತರ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ “ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು:
ಮತ್ತು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ: ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ಶ್ರದ್ದಾಪೂರ್ವಕ ಸಂಕಲ್ಪ ಮಾಡಬೇಕು ಎಂಬುದಾಗಿ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರರಾದ ಕಸವನಹಳ್ಳಿರಮೇಶ್, ನಗರಸಭೆ ವ್ಯವಸ್ಥಾಪಕರಾದ ಮಂಜುಳಾ, ಎಇಇ ಶ್ರೀರಂಗ, ಅಕೌಂಟ್ ಸೂಪರ್ ಡೆಂಟ್ ಗೋವಿಂದರಾಜು, ನಗರಸಭೆ ಆರೋಗ್ಯ ನಿರೀಕ್ಷಕರುಗಳಾದ ಶ್ರೀಮತಿಸಂದ್ಯಾ, ಅಶೋಕ್, ಸುನೀಲ್, ಮಹಾಲಿಂಗರಾಜು ಸೇರಿದಂತೆ ನಗರಸಭೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

