

ಹಿರಿಯೂರು:
ನಗರದ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಕವರ್ ಗಳ ಬಳಕೆಯನ್ನು ನಿಷೇಧಿಸುವುದು ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಗರದ ಅಂಗಡಿಗಳ ಮಾಲೀಕರುಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ನಗರವನ್ನು ನಿರ್ಮಾಣ ಮಾಡಬೇಕು ಎಂಬುದಾಗಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ ಕರೆ ನೀಡಿದರು.
ನಗರದ ನಗರಸಭೆ ವತಿಯಿಂದ ನಗರದ ಕಿರಾಣಿ ಮತ್ತಿತರ ಅಂಗಡಿಗಳಿಗೆ ಭೇಟಿ ನೀಡಿ, ಪ್ಲಾಸ್ಟಿಕ್ ಕವರ್ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ, ಪ್ಲಾಸ್ಟಿಕ್ ಮುಕ್ತ ನಗರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸಿ, ನಂತರ ಅವರು ಮಾತನಾಡಿದರು.

ನಗರದ ನಾಗರೀಕರು ಹಾಗೂ ಅಂಗಡಿಗಳ ಮಾಲೀಕರು ಜಾಗೃತರಾಗದಿದ್ದರೆ, ಪರಿಸರ ಮಾಲಿನ್ಯಕ್ಕೆ ನಾವೇ ಹೊಣೆಗಾರರಾಗಬೇಕಾಗುತ್ತದೆ, ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ನಿಷೇದಿಸದಿದ್ದರೆ ಅಂತಹ ಅಂಗಡಿ ಮಾಲೀಕರುಗಳ ವಿರುದ್ಧ ಕಠಿಣಕ್ರಮವನ್ನು ಕೈಗೊಳ್ಳಲಾಗುವುದು ಎಂಬುದಾಗಿ ಈ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂಧ್ಯಾ, ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್ ಹಾಗೂ ಮಹಾಲಿಂಗಪ್ಪ ಇವರುಗಳ ನೇತೃತ್ವದಲ್ಲಿ ನಗರದ ಅಂಗಡಿ-ಮುಂಗಟ್ಟುಗಳನ್ನು ಪರಿಶೀಲನೆ ನಡೆಸಲಾಯಿತು.