
ಹಿರಿಯೂರು:
ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ರಕ್ತವು ಜೀವ ಉಳಿಸುವ ಸಂಜೀವಿನಿಯಾಗಿದೆ, ನೀವು ಕೊಡುವ ರಕ್ತವನ್ನು ಬಿಳಿರಕ್ತಕಣ, ಕೆಂಪುರಕ್ತಕಣ, ಪ್ಲಾಸ್ಮಾ ಇನ್ನು ಹಲವು ರೀತಿಯ ರಕ್ತದ ವಿಧವಾಗಿ ವಿಂಗಡಿಸಿ, ಈ ರಕ್ತದಿಂದ ಸುಮಾರು 5-6 ಜನರ ಜೀವ ಉಳಿಸಬಹುದಾಗಿದೆ,ಈ ನಿಟ್ಟಿನಲ್ಲಿ ರಕ್ತದಾನ ಶಿಬಿರವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಚಿತ್ರದುರ್ಗ ಜಿಲ್ಲಾ ಪೋಲೀಸ್ ಹಿರಿಯೂರು ಉಪವಿಭಾಗ, ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಂಸ್ಥೆ, ಸರ್ವೋದಯ ಥಿಯೋಸಫಿಕಲ್ ಸೊಸೈಟಿ ಹಿರಿಯೂರು, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಯಾವುದೇ ಒಂದು ಅಪಘಾತವಾದಾಗ ಆ ಗೋಲ್ಡನ್ ಟೈಮ್ ಸಂದರ್ಭದಲ್ಲಿ ಮುಖ್ಯವಾಗಿ ರೋಗಿಯ ಜೀವವನ್ನು ಉಳಿಸಲು ಅವರಿಗೆ ರಕ್ತ ನೀಡಿವುದು ಮುಖ್ಯವಾಗಿದ್ದು, ಅಂತಹ ತುರ್ತು ಸಂದರ್ಭದಲ್ಲಿ ನಾವು ಕೊಟ್ಟಿರುವ ರಕ್ತವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವಂತಹ ಮಹತ್ತರ ಕೆಲಸವನ್ನು ಮಾಡುತ್ತದೆ, ಆದ್ದರಿಂದ ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂಬುದಾಗಿ ಹೇಳಿದರು.

ಡಿ.ವೈ.ಎಸ್.ಪಿ.ಶಿವಕುಮಾರ್ ಮಾತನಾಡಿ, ನಮ್ಮ ರಾಜ್ಯ ಪೋಲೀಸ್ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲೆಗಳಿಂದ ಬೇರೆ ಬೇರೆ ದಿನಾಂಕಗಳಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ರಕ್ತದಾನ ಮಹಾದಾನ ಎಂಬುದು ನಮಗೆ ತಿಳಿದಿರಬೇಕು, ರಕ್ತದಾನದ ಮೂಲಕ ಸಂಗ್ರಹಿಸದ ರಕ್ತವನ್ನು ರಕ್ತಕೇಂದ್ರದಲ್ಲಿ ಸಂಗ್ರಹಿಸಿ, ರಕ್ತ ಕಡಿಮೆಯಾಗಿ ಜೀವ ಹೋಗುತ್ತಿರುವ ವ್ಯಕ್ತಿಯ ಜೀವವನ್ನು ನಾವು ಸಂಗ್ರಹಿಸಿ ರಕ್ತದಿಂದ ಉಳಿಸಬಹುದಾಗಿದೆ ಎಂದರಲ್ಲದೆ,
ರಕ್ತ ಕೊಟ್ಟರೆ ದೇಹದಲ್ಲಿ ರಕ್ತ ಇಲ್ಲದಾಗಿ ನಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂಬ ಕಲ್ಪನೆ ಜನಸಾಮಾನ್ಯರಲ್ಲಿದ್ದು, ಈ ತಪ್ಪು ತಿಳುವಳಿಕೆಯಿಂದ ಜನರು ಇದರಿಂದ ಹೊರಬರಬೇಕು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗಲು ಸಹಕಾರಿಯಾಗುವುದಲ್ಲದೆ, ವ್ಯಕ್ತಿಯು ಚಟುವಟಿಕೆಯಿಂದ ಇರುತ್ತಾನೆ, ಆದ್ದರಿಂದ ಪೋಲೀಸ್ ಇಲಾಖೆ ಸಿಬ್ಬಂದಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ರಕ್ತದಾನ ಮಾಡಬಹುದು ಎಂಬುದಾಗಿ ಹೇಳಿದರು.
ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್. ಸುಂದರರಾಜ್ ಅವರು ಪ್ರಾಸ್ತಾವಿಕ ಮಾತನಾಡಿ, ಪೋಲೀಸ್ ಸಿಬ್ಬಂದಿಗಳು ಸಧೃಡರು ಆರೋಗ್ಯವಂತರೂ ಆಗಿದ್ದು, ಪೋಲೀಸ್ ಇಲಾಖೆ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದ್ದು, ನಮ್ಮ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸುಮಾರು 60ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಗಳು ರಕ್ತದಾನ ಮಾಡುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ಕೆ.ಎ.ವರುಣ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ-ವೇದಾವತಿ ಮೈನ್ಸ್ ನ ಸಿ.ಎಸ್.ಆರ್. ಆಫೀಸರ್ ಆದ ಜನನಿ ಸೇತುರಾಮ್, ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಇ.ಆನಂದ್, ಐಮಂಗಲ ಸರ್ಕಲ್ ಇನ್ಸ್ ಪೆಕ್ಟರ್ ಗುಡ್ಡಪ್ಪ, ಥಿಯೋಸಾಫಿಕಲ್ ಸೊಸೈಟಿಯ ಆನಂದಶೆಟ್ಟಿ, ರಂಗನಾಥಪ್ಪ, ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಕರವೇ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ, ರೋಟರಿ ಸೆಕ್ರೆಟರಿ ವಿಕಾಸ್ ಜೈನ್, ಎ.ರಾಘವೇಂದ್ರ, ಚಿತ್ರದುರ್ಗ ಬಸವೇಶ್ವರ ಹಾಸ್ಪಿಟಲ್ ನ ಭಾಗೀರಥಿ, ಹೊಸದುರ್ಗ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಐ.ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಎ.ಎಸ್.ಐ.ಗಳಾದ ಶ್ರೀಮತಿ ಎಂ.ರೇಖಾ ಅವರು ಪ್ರಾರ್ಥಿಸಿದರು. ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.

