March 2, 2026
000003

ಹಿರಿಯೂರು :

ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಬಾಲ್ಯದಲ್ಲಿಯೇ ಆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳು ಈ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದಾಗಿ ಆರ್.ಬಿ.ಎನ್ ಶಾಲೆಯ ಕಾರ್ಯದರ್ಶಿಗಳಾದ ಖಂಡೇನಹಳ್ಳಿ ಹನುಮಂತರಾಯಪ್ಪ ಹೇಳಿದರು.

ನಗರದ ಆರ್.ಬಿ.ಎನ್. ಮೆಮೋರಿಯಲ್ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಿರಿಯೂರು, ಕ್ಷೇತ್ರ ಸಂಪನ್ಮೂಲಕೇಂದ್ರ ಹಿರಿಯೂರು, ಸಮೂಹ ಸಂಪನ್ಮೂಲ ಕೇಂದ್ರ ನಗರ ಉತ್ತರ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025-26 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ ಮಾತನಾಡಿ, ಇಂದಿನ ಸಮಾಜದಲ್ಲಿ ಪ್ರತಿಯೊಂದು ಮಗುವೂ ಅತ್ಯಂತ ಪ್ರತಿಭಾವಂತನಾಗಿದ್ದು,ಈ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವಲ್ಲಿ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ ಎಂದರಲ್ಲದೆ, ಯಾವ ಮಗು ಸಹಪಠ್ಯ ಚಟುವಟಿಕೆಗಳಲ್ಲಿ ಅತ್ಯಂತ ಪ್ರತಿಭಾವಂತನಾಗಿರುತ್ತಾನೆ, ಆ ಮಗು ಓದಿನಲ್ಲಿಯೂ ಸಹ ಮುಂದಿರುತ್ತಾನೆ ಎಂಬುದಾಗಿ ಹೇಳಿದರು.

ನಗರಸಭೆ ಸದಸ್ಯರಾದ ಗುಂಡೇಶ್ ಕುಮಾರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ಶಿಸ್ತು, ಸಂಸ್ಕಾರ, ಉತ್ತಮ ಸನ್ನಡತೆಯನ್ನು ಕಲಿತು, ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು, ಚಿಕ್ಕ ವಯಸ್ಸಿನಲ್ಲಿಯೇ ಆಟ-ಪಾಠಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿದ್ದು, ಇದಕ್ಕೆ ಸೂಕ್ತ ಅವಕಾಶಗಳು ಸಿಗುವುದು ಈ ಪ್ರತಿಭಾಪುರಸ್ಕಾರದಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂಬುದಾಗಿ ಹೇಳಿದರು.  

ಸಿ.ಆರ್.ಪಿ. ಶ್ರೀಮತಿ ಆಶಾಲತಾ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ನಡೆಯುವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಕ್ಕಳು ಭಾಗವಹಿಸುತ್ತಿದ್ದು, ಇದರಲ್ಲಿ ಯಾವುದೇ ಸರ್ಕಾರಿ, ಖಾಸಗಿ ಶಾಲೆಗಳೆಂಬ ತಾರತಮ್ಯ ಮಾಡದೇ ಭಾಗವಹಿಸಿದ ಮಕ್ಕಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಮಕ್ಕಳಿಗೆ ಮಾತ್ರ ಬಹುಮಾನಗಳನ್ನು ಘೋಷಿಸಲಾಗುವುದು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಬಿ.ಎನ್ ಶಾಲೆಯ ಕಾರ್ಯದರ್ಶಿಗಳಾದ ಖಂಡೇನಹಳ್ಳಿ ಹನುಮಂತರಾಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಆಲೂರುಹನುಮಂತರಾಯಪ್ಪ, ನಗರಸಭೆ ಸದಸ್ಯರಾದ ಗುಂಡೇಶ್ ಕುಮಾರ್, ಸಿ.ಆರ್.ಪಿ. ಶ್ರೀಮತಿ ಆಶಾಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಲೋಕಮ್ಮ, ಸಕ್ಕರೆ ಕಾರ್ಖಾನೆ ಶಾಲೆಯ ಮುಖ್ಯೋಪಾಧ್ಯಾಯರಾದ ಈ.ರಮೇಶ್ ನಾಯ್ಕ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಮೂರ್ತಿ, ಬಿ.ಆರ್.ಪಿ.ಗಳಾದ ಪ್ರಸನ್ನಕುಮಾರ್, ಹಾಗೂ ನಾಗರಾಜ್, ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *