March 6, 2026
00002

ಹಿರಿಯೂರು:

ಕನ್ನಡದ ಮನಸ್ಸುಗಳು ಒಟ್ಟಾಗಿ  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಅಭಿವೃದ‍್ಧಿಪಡಿಸಲು ಕವಿಗೋಷ್ಠಿಗಳು ಸಹಕಾರಿಯಾಗಿವೆ ಎಂಬುದಾಗಿ ಸಮಾಜ ಸೇವಕಿ  ಶ್ರೀಮತಿ ಶಶಿಕಲಾರವಿಶಂಕರ್ ಅವರು ಹೇಳಿದರು.

ತಾಲ್ಲೂಕಿನ ವಾಣಿವಿಲಾಸಪುರದಲ್ಲಿ ಭಾನುವಾರ ವಾಣಿವಿಲಾಸಸಾಗರ ಜಲಾಶಯ ಅಣೆಕಟ್ಟೆ 4ನೇ ಬಾರಿ ಭರ್ತಿಯಾದ ಕಾರಣ ವಿಶ್ವ ಕನ್ನಡ ಕಲಾ ಸಂಸ್ಥೆ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ‍್ದಿ  ಸಂಸ್ಥೆ ಹಾಗೂ ವಿಜಯಕಿರಣ ಪರಿಸರ ಜಾಗೃತಿ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಗಿನ ಸಮರ್ಪಣೆ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿಯೊಬ್ಬರೂ ಪ್ರತಿನಿತ್ಯ ವಾಣಿವಿಲಾಸಸಾಗರಜಲಾಶಯ  ಅಣೆಕಟ್ಟೆ ನಿರ್ಮಾಣಕ್ಕೆ ಕಾರಣವಾಗಿರುವ ನಾಲ್ವಡಿ ಕೃಷ್ಣರಾಜಒಡೆಯರ್ ಹಾಗೂ ಅವರ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರನ್ನು ಸ್ಮರಿಸಿಕೊಳ್ಳಲೇಬೇಕು. ಅಪರೂಪಕ್ಕೆ ಎಂಬಂತೆ  ಅಣೆಕಟ್ಟೆ ಕೋಡಿ ಬಿದ್ದಿರುವ ಕಾರಣ ಬಾಗಿನ ಸಮರ್ಪಿಸುತ್ತಿದ್ದು, ಮುಂದೆಯೂ ಅಣೆಕಟ್ಟೆ ಹೀಗೆಯೇ ಭರ್ತಿಯಾಗುತ್ತಿರಲಿ ಎಂದರಲ್ಲದೆ,

ನಮ್ಮ ಜಿಲ್ಲೆ ಕನ್ನಡ ಸಾರಸ್ವತ ಲೋಕಕ್ಕೆ ತ.ರಾ.ಸು. ಥಳುಕಿನವೆಂಕಣ್ಣಯ್ಯ  ಬೆಳಗೆರೆಕೃಷ್ಣಶಾಸ್ತ್ರಿ, ಬಿ.ಎಲ್.ವೇಣು ಅವರಂತಹ ದಿಗ್ಗಜರನ್ನು ಕೊಟ್ಟಿದೆ. ಜಿಲ್ಲೆಯ ಜೀವನಾಡಿ ಆಗಿರುವ ಅಣೆಕಟ್ಟೆ ತುಂಬಿರುವಾಗ ಪ್ರಕೃತಿಯ ಮಡಿಲಲ್ಲಿ ಕವಿಗೋಷ್ಠಿ ಆಯೋಜನೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂಬುದಾಗಿ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಕನ್ನಡ ಕಲಾ ಸಂಸ್ಥೆ ಸ್ಥಾಪಕ ಈ. ರವೀಶ್ ಅಕ್ಕರ ಅವರು ಮಾತನಾಡಿ  ನಮ್ಮ ಸಂಸ್ಥೆಯ ನೇತೃತ್ವದಲ್ಲಿ ಇಂತಹ ಕವಿಗೋಷ್ಠಿಗಳು, ಕಮ್ಮಟಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಗೆ ಅಳಿಲು ಸೇವೆ ಸಲ್ಲಿಸುತ್ತೇವೆ ಎಂಬುದಾಗಿ ಅವರು ಹೇಳಿದರು.

ಕವಿಗೋಷ್ಠಿಗೂ ಮೊದಲು ವಾಣಿವಿಲಾಸ ಸಾಗರ ಜಲಾಶಯ  ಅಣೆಕಟ್ಟೆಯ ಕೋಡಿ ಭಾಗದಲ್ಲಿ ಬಾಗಿನ ಅರ್ಪಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಜಹರ್ ಉಲ್ಲಾ, ಕೆ.ಎನ್.ಮಹೇಶ್, ನವೀನ್ ಬಿ. ಸಜ್ಜನ್, ವಿನಾಯಕ, ನವೀನ್ ಮಸ್ಕಲ್, ಶ್ರೀನಿವಾಸ್ ಮಳಲಿ, ದೇವೇಂದ್ರಪ್ಪಕುಂಚಿಗನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *