
ಹಿರಿಯೂರು:
ದೇಶದಲ್ಲಿ ಸಹಕಾರ ಚಳುವಳಿ ಪ್ರಗತಿ ಪಥದಲ್ಲಿ ಸಾಗಲು ಮಾಜಿ ಪ್ರಧಾನಿ ನೆಹರೂ ಅವರ ಕೊಡುಗೆ ಅಪಾರವಾಗಿದ್ದು, ಸಹಕಾರ ತತ್ವ ಆಚರಣೆಯಲ್ಲಿ ಅಪಾರ ನಂಬಿಕೆ ಇಟ್ಟಿದ್ದ ನೆಹರೂ ಅವರು ಭಾರತವನ್ನು ಆರ್ಥಿಕವಾಗಿ ಸದೃಡಗೊಳಿಸಲು ಸಹಕಾರ ತತ್ವದ ಮೂಲಕ ಅಡಿಪಾಯ ಹಾಕಿದರು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ ಆವರಣದಲ್ಲಿ ರಾಜ್ಯ ಸಹಕಾರ ಮಂಡಳಿ, ಡಿ.ಸಿ.ಸಿ.ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ತಾಲ್ಲೂಕು ಪತ್ತಿನ ಸಹಕಾರ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು, ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಂಚವಾರ್ಷಿಕ ಯೋಜನೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದ ನೆಹರೂ ಅವರ ದೂರದೃಷ್ಠಿಯ ಫಲವಾಗಿ ಇಂದು ಸಹಕಾರ ಚಳುವಳಿ ವೈಶಿಷ್ಟ್ಯ ಪೂರ್ಣವಾಗಿ ಬೆಳೆದಿದ್ದು, ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಸಕ್ರಿಯವಾಗಿದ್ದು, 60 ಸಾವಿರ ಕೋಟಿಗೂ ಹೆಚ್ಚು ಠೇವಣಿ ಹೊಂದಿದ್ದು, ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ ಎಂಬುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಸಹಕಾರ ಸಂಘಗಳಿಗೆ ಶಕ್ತಿ ತುಂಬಿ, ಸಹಕಾರ ಕ್ಷೇತ್ರದ ಮೂಲಕ ಗ್ರಾಮೀಣ ಪ್ರದೇಶದ ರೈತರು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ, ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಿನ ಹಸ್ತ ಚಾಚಲಾಗಿದ್ದು, ಸಮಾಜದ ಬಡಜನರ, ದುರ್ಬಲರ, ಪ.ಜಾತಿ, ಪ.ವರ್ಗ, ಹಿಂದುಳಿದವರ ಅಭಿವೃದ್ಧಿಗಾಗಿಯೇ ಈ ಸಹಕಾರ ಸಂಘಗಳು ಶ್ರಮಿಸುತ್ತಿದೆ ಎಂಬುದಾಗಿ ಅವರು ಹೇಳಿದರು.

ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಜಗದೀಶ್ ಅವರು ಮಾತನಾಡಿ , ಜಿಲ್ಲೆಯಲ್ಲಿ ಸಹಕಾರ ಸಂಘಗಳು ಪ್ರಗತಿಪಥದಲ್ಲಿ ಸಾಗಲು ಸಚಿವರಾದ ಡಿ.ಸುಧಾಕರ್ ಅವರ ಕೊಡುಗೆ ಅಪಾರವಾಗಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ಜಿಲ್ಲೆಯ ರೈತರು, ಮಹಿಳಾಸಂಘಗಳು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಬದುಕಿಗೆ ವರದಾನವಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪನವರು ನಮ್ಮ ಚಿತ್ರದುರ್ಗ ಜಿಲ್ಲೆ ಸಹ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಸಹಕಾರಿ ಸಚಿವರುಗಳಾಗಿದ್ದ ದಿವಂಗತ.ಬಿ.ಎಲ್.ಗೌಡ, ದಿ.ಕೆ.ಹೆಚ್.ರಂಗನಾಥ್, ದಿ.ವಿ.ಮಸಿಯಪ್ಪ ಹಾಗೂ ಮಾಜಿ ಸಹಕಾರ ಸಚಿವರಾದ ಹೆಚ್.ಏಕಾಂತಯ್ಯನವರನ್ನು ಈ ದಿನ ನಾವೆಲ್ಲಾ ಸ್ಮರಿಸಬೇಕು ಎಂದರಲ್ಲದೆ,
ಈ ಜಿಲ್ಲೆಯ ಎಲ್ಲಾ ಸಹಕಾರಿಗಳ ಕನಸಿನ ಕೂಸಾದ ವಾಣಿಸಕ್ಕರೆ ಕಾರ್ಖಾನೆ ಲಾಕೌಟ್ ಆಗಿದ್ದು, ಈ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಕಬ್ಬು ಬೆಳೆಯಲು ಪ್ರೋತ್ಸಾಹಿಸಿ, ಕಾರ್ಖಾನೆಯನ್ನು ಪುನರಾರಂಭಿಸಿ ಕಾರ್ಮಿಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಕೆಲಸವನ್ನು ಸರ್ಕಾರದ ಮೇಲೆ ಒತ್ತಡ ತಂದು ಕ್ಷೇತ್ರದ ಸಚಿವ ಸುಧಾಕರ್ ರವರು ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ಕಂದಿಕೆರೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಜೆ.ಆರ್.ರವಿಕುಮಾರ್, ನಿರ್ದೇಶಕರಾದ ಎಂ.ಎಸ್.ಈರಲಿಂಗೇಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಸ್.ಜೆ.ಹನುಮಂತರಾಯಪ್ಪ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ, ಬಿ.ಜಿ.ಶೇಖರ್ ಹೊಳಲ್ಕೆರೆ, ರಾಜ್ಯಸಂಪನ್ಮೂಲ ವ್ಯಕ್ತಿ ಎಂ.ಕೆ.ಲಕ್ಷ್ಮಿ, ಶಿಮೂಲ್ ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಜೆ.ಹನುಮಂತರಾಯ, ಕೃಷಿ ಬ್ಯಾಂಕ್ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಾದ ಆರ್.ಎಸ್.ದಿಲೀಪ್ ಕುಮಾರ್, ಸಹಾಯಕ ನಿಬಂಧಕರಾದ ಕೆ.ಶಿವಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಶಶಿಧರ್, ಸಹಕಾರಿ ಯೂನಿಯನ್ ಸಿಇಓ ಶ್ರೀಮತಿ ಜಯಶ್ರೀಹುನಗುಂದ, ವ್ಯವಸ್ಥಾಪಕಿ ಶ್ರೀಮತಿ ಸೌಮ್ಯ, ತಾಲ್ಲೂಕು ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ರಾಘವೇಂದ್ರ, ಕಾರ್ಯದರ್ಶಿ ವೈ.ಎಸ್.ಉಮಾಶಂಕರ್, ಸೇರಿದಂತೆ ಅನೇಕ ಸಹಕಾರಿ ಗಣ್ಯರು, ರೈತಮುಖಂಡರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಸಿಇಓ ಶ್ರೀಮತಿ ಜಯಶ್ರೀ ಹುನಗುಂದ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿಮಾನಸ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

