
ಹಿರಿಯೂರು:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಘೋಷಿಸಿದ್ದ ಜನವಿರೋಧಿ ಮಹಾಘಟ್ ಬಂಧನ್ ಪಕ್ಷವನ್ನು ಮತದಾರರು ತಿರಸ್ಕರಿಸಿ ನಾವು ಪ್ರಧಾನಿ ನರೇಂದ್ರಮೋದಿಯವರ ಅಭಿವೃದ್ಧಿ ಪರವಾಗಿದ್ದೇವೆಂದು ಒಪ್ಪಿಕೊಂಡ ಬಿಹಾರದ ಜನರು ಎನ್.ಡಿ.ಎ.ಗೆ ಮತ್ತೊಮ್ಮೆ ಆಡಳಿತ ನೀಡಿದ್ದಾರೆ ಎಂಬುದಾಗಿ ಜೆ.ಡಿ.ಎಸ್.ನ ಹಿರಿಯ ಮುಖಂಡರಾದ ಎಂ. ರವೀಂದ್ರಪ್ಪ ಅವರು ಹೇಳಿದರು.
ಪತ್ರಿಕಾ ಪ್ರಕಟಣೆ ಮೂಲಕ ಬಿಹಾರ ಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಹಾರ ಸಿ.ಎಂ. ನಿತೀಶ್ ಕುಮಾರ್ ಅವರ ಆಡಳಿತ ವೈಖರಿ ಮೆಚ್ಚಿ ಐತಿಹಾಸಿಕ ಗೆಲುವು ನೀಡುವ ಮೂಲಕ ದೇಶದ ಸಮರ್ಥ ನಾಯಕ ಮೋದಿಯೆಂದು ಬಿಹಾರ ಜನತೆ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಬೆಳಗಾವಿಯಲ್ಲಿ ಹೋರಾಟ ಮಾಡಿ ಕಬ್ಬುಬೆಳೆಗಾರರು ಕಬ್ಬಿಗೆ ಬೆಂಬಲ ಬೆಲೆ ಪಡೆದುಕೊಂಡರು. ಈರುಳ್ಳಿ ಹಾಗೂ ಮೆಕ್ಕೆಜೋಳ ಬೆಳೆಗಳ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂಬುದಾಗಿ ಅವರು ಕಿಡಿಕಾರಿದರು.
ಮುಂಬರುವ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಫಲಿತಾಂಶದಂತೆ ರಾಜ್ಯದಲ್ಲಿ ಎನ್.ಡಿ.ಎ. ಜಯಭೇರಿ ಬಾರಿಸಲಿದೆ. ಹೈಕಮಾಂಡ್ ತೀರ್ಮಾನದಂತೆ ಮುಂಬರುವ ಸ್ಥಳೀಯ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ, ಎನ್.ಡಿ.ಎ. ಪಕ್ಷಗಳು ಅಧಿಕಾರಕ್ಕೆ ಬರಲು ಹೋರಾಟ ಮಾಡಲಾಗುವುದು ಎಂಬುದಾಗಿ ಅವರು ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ, ಸಿಂಗಲ್ ಸಂಖ್ಯೆಗೆ ಇಳಿಯುವ ಮೂಲಕ ಹೀನಾಯವಾಗಿ ಸೋಲಿಸುವ ಮೂಲಕ ಬಿಹಾರ ಮತದಾರರು ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂತೆ ಬುದ್ಧಿ ಕಲಿಸಿದ್ದಾರೆ. ಕಾಂಗ್ರೆಸ್ ಧೋರಣೆಯನ್ನು ಜನರು ವಿರೋಧಿಸಿದ್ದು, ದೇಶದಲ್ಲಿ ಎನ್.ಡಿ.ಎ. ಅಭಿವೃದ್ಧಿಯ ಅಲೆ ಮುಂದುವರಿದಿದೆ ಎಂಬುದಾಗಿ ಅವರು ಹೇಳಿದರು.

