
ಹಿರಿಯೂರು :
ಕನ್ನಡ ಭಾಷೆ ನಮ್ಮ ಮಾತೃಭಾಷೆ ,ಈ ನಾಡಿನ ಆಡಳಿತ ಭಾಷೆ, ಅದು ನಮ್ಮ ಜೀವದ ಭಾಷೆ. ಈ ನಮ್ಮ ಭಾಷೆಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಇಂತಹ ಸುಂದರವಾದ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುದಾಗಿ ಶ್ರೀವಾಣಿವಿಲಾಸ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಮಂಜುನಾಥ್ ಅವರು ಹೇಳಿದರು.
ತಾಲ್ಲೂಕಿನ ಆರನಕಟ್ಟೆ ಶ್ರೀವಾಣಿವಿಲಾಸ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡಪ್ರಜ್ಞೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ, ಈ ಭಾಷೆ ತನ್ನದೇ ಆದ ಸುಂದರ ಲಿಪಿಗಳನ್ನು ಹೊಂದಿದೆ, ಇಂತಹ ಕನ್ನಡ ನಾಡು-ನುಡಿಯ ಬಗ್ಗೆ ಕನ್ನಡಿಗರಾದ ನಾವುಗಳು ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಸಾಹಿತಿಗಳು ಹಾಗೂ ಉಪನ್ಯಾಸಕರಾದ ಪ್ರೊ.ಎಂ.ಜಿ.ರಂಗಸ್ವಾಮಿ ಅವರು ಮಾತನಾಡಿ, ಕನ್ನಡ ಭಾಷೆ, ವಿಶ್ವಕ್ಕೆ ತನ್ನದೇ ಆದ ಅಪಾರ ಕಾಣಿಕೆಯನ್ನು ಕೊಟ್ಟಂತಹ ಭಾಷೆಯಾಗಿದೆ. ಇಂತಹ ನಮ್ಮ ಕನ್ನಡ ಭಾಷೆಯು ಉಳಿಯಬೇಕಾದರೆ ನಮ್ಮ ನಾಡಿನ ನೆಲ-ಜಲ, ಸಂಪತ್ತಿನ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂಬುದಾಗಿ ಅವರು ಕರೆಕೊಟ್ಟರು.
ಎಂ.ಅನಂತರವರು ಮಾತನಾಡಿ, ಕನ್ನಡ ಭಾಷೆಯು ಅತ್ಯಂತ ಸರಳ ಹಾಗೂ ಸುಂದರ ಭಾಷೆಯಾಗಿದ್ದು, ಕನ್ನಡಿಗರಾದ ನಾವುಗಳು ಕನ್ನಡ ನಾಡು-ನುಡಿಯ ಬಗ್ಗೆ ತಿಳಿದುಕೊಳ್ಳಬೇಕು, ಆಗ ಮಾತ್ರ ಭಾಷೆಯ ಶ್ರೇಷ್ಠತೆಯ ಅರಿವಾಗುತ್ತದೆ, ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ನಾವು ನೀವೆಲ್ಲರೂ ಕಂಕಣ ಬದ್ಧರಾಗಬೇಕು ಎಂಬುದಾಗಿ ಅವರು ಹೇಳಿದರು.

ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಈಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಆರನಕಟ್ಟೆರಂಗನಾಥ್ ರವರು ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನದ ಗೌರವ ಬಂದಿದೆ. ಇಂತಹ ಸುಂದರ ಭಾಷೆ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಬೇಕು ಎಂಬುದಾಗಿ ಅವರು ಆಶಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಜಿ. ರಾಮಲಿಂಗೇಗೌಡ್ರು ಅವರು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡದೇ ಮಕ್ಕಳು ಉತ್ತಮವಾಗಿ ಅಭ್ಯಾಸವನ್ನು ಮಾಡುವ ಮೂಲಕ ಈ ದೇಶದ ಸುಸಂಸ್ಕೃತ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರಾದ ಜಿ.ರಾಜು ವಡಿವೇಲ್ ರವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿಯಾದ ಶ್ರೀಮತಿ ಚಂದ್ರಕಲಾ ವಂದಿಸಿದರು. ಶ್ರೀಮತಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎನ್.ಶಿವಕುಮಾರ್, ಶಾಲೆಯ ಶಿಕ್ಷಕರಾದ ತೀರ್ಥ, ತಿಪ್ಪೇಸ್ವಾಮಿ, ಜಯಣ್ಣ, ರುದ್ರಯ್ಯ, ದೇವರಾಜ್, ರಂಗಸ್ವಾಮಿ, ಶಿಕ್ಷಕಿಯರಾದ ಶ್ರೀಮತಿ ವೀಣಾ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಚಂದ್ರಕಲಾ, ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

