
ಹಿರಿಯೂರು :
ನಗರದ ಸ್ವಚ್ಛತೆ ಹಾಗೂ ಶುಚಿತ್ವವನ್ನು ಕಾಪಾಡುವ ಉದ್ದೇಶದಿಂದ ಪ್ರತಿ ಶನಿವಾರ ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ ನಗರಸಭೆ ವತಿಯಿಂದ “ನಮ್ಮ ಚಿತ್ತ ಸ್ವಚ್ಛತೆಯತ್ತ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯಪ್ರವೃತ್ತರಾಗಿದ್ದು, ಸಾರ್ವಜನಿಕರು ನಮಗೆ ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಹೇಳಿದರು.
ನಗರದ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆ ವತಿಯಿಂದ “ನಮ್ಮ ಚಿತ್ತ ಸ್ವಚ್ಛತೆಯತ್ತ” ಸ್ವಚ್ಛತಾ ಆಂದೋಲನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿರಿಯೂರಿಗೆ ನೀರು ಸರಬರಾಜು ಮಾಡುತ್ತಿರುವ ಎಂ.ಎಲ್.ಡಿ.ಸಾಮರ್ಥ್ಯದ ಜಲಶುದ್ದೀಕರಣ ಘಟಕ ಹಾಗೂ ಯಂತ್ರಗಾರದ ಮನೆಯ ಕಾಂಪೌಂಡ್ ಸುತ್ತಮುತ್ತಲು ಬೆಳೆದಿದ್ದ ಹುಲ್ಲು, ಗಿಡಗಂಟೆಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸ್ಕ್ರ್ಯಾಪ್ ವಾಹನಗಳು ಚಾಲನೆಗೆ ಬಾರದೆ ನಿಂತಿದ್ದ ಜಾಗವನ್ನು ಸ್ವಚ್ಛಗೊಳಿಸಲಾಗಿದ್ದು, ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವುದೇ ನಮ್ಮ ಉದ್ದೇಶವಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ, ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಹೆಚ್. ಟಿ. ಸುನೀಲ್ ಕುಮಾರ್, ಶ್ರೀಮತಿ ಸಂಧ್ಯಾ ವೈ ಎಸ್ , ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್ ಎಸ್, ಮಹಾಲಿಂಗರಾಜು, ನಯಾಜ್ ಶರೀಫ್, ಮತ್ತು ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ಬಿ.ಹನುಮಂತರಾಜು ಹಾಗೂ ದಪ್ಪೇದಾರಗಳು ಮತ್ತು ಪೌರಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
