
ಹಿರಿಯೂರು :
ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿ ಮೌಢ್ಯತೆಗಳು, ಮೂಡನಂಬಿಕೆಗಳು, ಜಾತಿ ಕಟ್ಟುಪಾಡುಗಳನ್ನು ತೊಡೆದುಹಾಕುವಲ್ಲಿ ಪ್ರಮುಖಪಾತ್ರವನ್ನು ವಹಿಸಲಾಗಿದ್ದು, ಇಂದಿನ ವಿದ್ಯಾರ್ಥಿಗಳು ಕನಕದಾಸರ ಜೀವನ ಹಾಗೂ ಆದರ್ಶ ಅವರ ಕೀರ್ತನೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಸಮಾಜ ಸುಧಾರಕರ ಸಾಲಿಗೆ ಸೇರಿದ ಕನಕದಾಸರ ಜಯಂತಿಯನ್ನು ಕೇವಲ ರಜಾ ದಿನಗಳಾಗಿ ಘೋಷಿಸುವ ಬದಲಾಗಿ ಶಾಲೆಗಳಲ್ಲಿ ಕನಕ ಜಯಂತಿಗಳಂದು ವಿದ್ಯಾರ್ಥಿಗಳಿಗೆ ಕನಕದಾಸರ ಜೀವನದ ಸಂದೇಶವನ್ನು ತಿಳಿಸುವ ಮೂಲಕ ಕನಕದಾಸರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂಬುದಾಗಿ ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ಸಂತಶ್ರೇಷ್ಠರಾದ ಕನಕದಾಸರು ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಕನಕದಾಸರು ಜನಸಾಮಾನ್ಯರಿಗೆ ಅರ್ಥವಾಗುವ ಸರಳವಾದ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದರಲ್ಲದೆ, ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅನಿಷ್ಠ ಪದ್ಧತಿಗಳನ್ನು ಹಾಗೂ ಮೂಢನಂಬಿಕೆಗಳನ್ನು ತಿದ್ದಲು ಪ್ರಯತ್ನಿಸಿದ ಮಹಾನ್ ಚೇತನ, ಇವರ ಕೀರ್ತನೆಗಳನ್ನು ನಾವು-ನೀವೆಲ್ಲರೂ ತಿಳಿದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋಆರ್ಡಿನೇಟರ್ ಶ್ರೀಮತಿ ರಚನ, ಶಿಕ್ಷಕ-ಶಿಕ್ಷಕಿಯರುಗಳಾದ ಶಿವರಾಜ್ ನಾಯಕ್, ಶ್ರೀಮತಿ ಗಂಗಮ್ಮ, ಶ್ರೀಮತಿ ರಜೀಯಾ, ಶ್ರೀಮತಿ ರಂಜಿತಾ, ಶ್ರೀಮತಿ ಮುಬೀನಾ, ಶ್ರೀಮತಿ ಸಬೀಹಾ, ಶ್ರೀಮತಿ ಹೇಮಲತಾ, ಶ್ರೀಮತಿ ದ್ರಾಕ್ಷಾಯಣಿ, ಶ್ರೀಮತಿ ಸಾಧಿಕಾ, ಶ್ರೀಮತಿ ಮಮತಾ, ಶ್ರೀಮತಿ ಅಕ್ಷಿತಾ, ಶ್ರೀಮತಿ ಸುಲೋಚನಾ, ಕಾವ್ಯ, ಸುರೇಶ್, ಪ್ರಭಾಕರ್, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜೈಸುಧಾ, ಕು||ಪೂಜಾ, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

