March 6, 2026
0000000001

ಹಿರಿಯೂರು :

ಮಕ್ಕಳಿಗೆ ಬಾಲ್ಯದಿಂದಲೇ ಅಜ್ಜಿ-ತಾತಂದಿರೊಂದಿಗಿನ ಅವಿನಾಭಾವ ಸಂಬಂಧವನ್ನು ವೃದ್ಧಿಸುವ ದೃಷ್ಟಿಯಿಂದ ಅಜ್ಜಿ-ತಾತಂದಿರು ಹಾಗೂ ಮೊಮ್ಮಕ್ಕಳನ್ನು ಒಟ್ಟುಗೂಡಿಸಿ, ಸಮಾಜದಲ್ಲಿ ಕೌಟುಂಬಿಕ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನಮ್ಮ ವಿದ್ಯಾಸಂಸ್ಥೆಯಲ್ಲಿ “ಗ್ರಾಂಡ್ ಪೇರೆಂಟ್ಸ್ ಡೇ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಆವರಣದಲ್ಲಿ ಶಾಲಾ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಹಿರಿಯ ನಾಗರೀಕರ ದಿನಾಚರಣೆ”ಹಾಗೂ “ಗ್ರಾಂಡ್ ಪೇರೆಂಟ್ಸ್ ಡೇ” ಕಾರ್ಯಕ್ರಮದಲ್ಲಿ ಬಡಾವಣೆಯ ಹಿರಿಯ ನಾಗರೀಕರಿಗೆ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ, ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಅಜ್ಜಿ, ತಾತ, ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಕ್ಕಳನ್ನೊಳಗೊಂಡ ಅವಿಭಕ್ತ ಕುಟುಂಬಗಳು ಪರಸ್ಪರ ಮಕ್ಕಳು ಹಾಗೂ ಬಂಧು-ಬಳಗದ ನಡುವೆ ಕೌಟುಂಬಿಕ ಬಾಂಧವ್ಯವನ್ನು ಬೆಸೆಯುತ್ತಿದ್ದವು, ಆದರೆ ಇದೀಗ ಆಧುನಿಕ ಜಗತ್ತಿನ ನಗರಗಳಲ್ಲಿ ಅಪ್ಪ, ಅಮ್ಮ, ಮಕ್ಕಳು ಮಾತ್ರ ಇರುವ ವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು,  ಅಜ್ಜಿ-ತಾತಂದಿರ ಪ್ರೀತಿ ಮೊಮ್ಮಕ್ಕಳಿಗೆ ಸಿಗುವುದು ಮರೀಚಿಕೆಯಾಗಿದೆ ಎಂದರಲ್ಲದೆ,

ಸಂಪತ್ತನ ಗಳಿಕೆಯ ಮುಂದೆ ಎಲ್ಲಾ ಮಾನವೀಯ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿರುವ ಆಧುನಿಕ ಪ್ರಪಂಚದಲ್ಲಿ ಮಕ್ಕಳು ಮನೆಯ ಹಿರಿಯರಾದಂತಹ ಅಜ್ಜಿತಾತಂದಿರ ಪ್ರೀತಿಯಿಂದ ವಂಚಿತರಾಗುತ್ತಿದ್ದು, ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳಿಗೆ ತಂದೆ-ತಾಯಿಗಳ ಪ್ರೀತಿಯ ಜೊತೆಗೆ ಅಜ್ಜಿ-ತಾತದಿಂದರ ಸಂಸ್ಕಾರವೂ ಸಿಗಬೇಕಾಗಿದೆ, ಈ ನಿಟ್ಟಿನಲ್ಲಿ ಮಕ್ಕಳು ತಂದೆ-ತಾಯಿಗಳ ಜೊತೆಗೆ ತಾತ-ಅಜ್ಜಿಯರನ್ನು ಪ್ರೀತಿಸಿ-ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಹೇಳಿದರು.

ತಾತ-ಅಜ್ಜಿಯರು ತಮ್ಮ ಮೊಮ್ಮಕ್ಕಳನ್ನು ತೊಡೆಯ ಮೇಲೆ ಕೂಡಿಸಿಕೊಂಡು ಹೇಳುವ ನೀತಿ ಕಥೆಗಳು ಹಾಗೂ ಅವರ ಬಾಲ್ಯದ ಅನುಭವಗಳು ಮೊಮ್ಮಕ್ಕಳಿಗೆ ದಾರಿದೀಪವಾಗಿದ್ದು ಈ ಕಥೆಗಳು ಮೊಮ್ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವುದರ ಜೊತೆಗೆ ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳಿಸಿ, ಉನ್ನತ ಮಟ್ಟದ ಸಾಧನೆ ಮಾಡಲು ಪ್ರೇರಣೆಯನ್ನು ನೀಡುತ್ತದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆ ವತಿಯಿಂದ ಬಡಾವಣೆಯ ಹಿರಿಯ ನಾಗರೀಕರುಗಳಾದ ಶ್ರೀಯುತ ರಾಮಲಿಂಗಶೆಟ್ಟಿ,  ಶ್ರೀಮತಿ ವಿನೋದಮ್ಮ, ಶ್ರೀಮತಿ ಶಕುಂತಲಮ್ಮ, ಶ್ರೀಮತಿ ರುದ್ರಮ್ಮ, ಶ್ರೀಮತಿ ಗಂಗಮ್ಮ, ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಹಾಗೆಯೇ ವಿದ್ಯಾಸಂಸ್ಥೆಯ ಮುದ್ದಿನ ಮಕ್ಕಳಿಗೆ ಅಜ್ಜಿ-ತಾತಂದಿರಾದ ಶ್ರೀಮತಿ ಆರಿಫ್ ಉನ್ನೀಸಾ, ಅಕ್ಬರ್ ಅಲಿ, ನರಸಿಂಹಮೂರ್ತಿ, ಶ್ರೀಮತಿ ರಂಗಮ್ಮ, ಶ್ರೀಮತಿ ನೂರ್ಜಾನ್, ಇವರುಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ.ಆರ್ಡಿನೇಟರ್ ಶ್ರೀಮತಿ ರಚನಾ, ಶಿಕ್ಷಕ-ಶಿಕ್ಷಕಿಯರುಗಳಾದ ಶ್ರೀಮತಿ ಸಬೀಹಾ, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಕು||ಪೂಜಾ, ಶಿವರಾಜ್ ನಾಯಕ ಸೇರಿದಂತೆ ಶಾಲಾ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳು ಹಾಗೂ ಮಕ್ಕಳ ಪೋಷಕರು, ಅಜ್ಜ-ಅಜ್ಜಿಯರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *