
ಹಿರಿಯೂರು:
ಬೆಳಗಾಂ ಜಿಲ್ಲೆ ಕುರ್ಲಾಪುರ್ ಕ್ರಾಸ್ ಅಲ್ಲಿ ಲಕ್ಷಾನುಗಟ್ಟಲೆ ರೈತರು ತಮ್ಮ ಬದುಕು ಬಿಟ್ಟು ಹೆಂಡತಿ ಮಕ್ಕಳೊಂದಿಗೆ ಬಂದು ಬೀದಿಯಲ್ಲಿ ಕುಳಿತು 7 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದು, ರೈತರ ಒತ್ತಾಯಿಸಿರುವಂತೆ ಸರ್ಕಾರ ಈ ಕೂಡಲೇ 1 ಟನ್ ಕಬ್ಬು ಬೆಳೆಗೆ 3500 ರೂ ದರವನ್ನು ನಿಗದಿ ಮಾಡಬೇಕು ಎಂಬುದಾಗಿ ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ. ತಿಪ್ಪೇಸ್ವಾಮಿ ಅವರು ಹೇಳಿದರು.
ನಗರದ ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ರೈತರ ಒಂದು ಟನ್ ಕಬ್ಬಿಗೆ 3500 ರೂ ನಿಗದಿ ಮಾಡುವಂತೆ ಒತ್ತಾಯಿಸಿ, ತಾಲ್ಲೂಕು ರೈತಸಂಘದ ವತಿಯಿಂದ ತಾಲ್ಲೂಕು ತಹಶೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿಪತ್ರ ಸಲ್ಲಿಸಿ ನಂತರ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ, ಕೀಟನಾಶಕ ಮತ್ತು ರೈತರು ಬಳಸುವ ಪರಿಕರಗಳ ಬೆಲೆ ದುಬಾರಿಯಾಗಿದೆ. ಬಹುತೇಕ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ದಾರಿಯನ್ನು ಹಿಡಿದಿದ್ದಾರೆ. ಒಂದು ಟನ್ ಕಬ್ಬಿನಿಂದ ಅನೇಕ ಉತ್ಪನ್ನಗಳ ಮೂಲಕ ಸರ್ಕಾರಗಳಿಗೆ ಬಹುದೊಡ್ಡ ಆದಾಯ ಬರುತ್ತದೆ.
ಆದರೆ, ಕಬ್ಬು ಬೆಳೆದ ರೈತರಿಗೆ ನಾನಾ ರೀತಿಯ ಮೋಸಗಳು ನಿರಂತರವಾಗಿ ನಡೆಯುತ್ತಿವೆ. ಚಳುವಳಿ ಹೋರಾಟದಲ್ಲಿ ತೊಡಗಿರುವ ರೈತರು ಸರ್ಕಾರದ ಮುಂದೆ ಇಟ್ಟಿರುವ ಎಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಬೆಳಗಾಂ ರೈತರ ಹೋರಾಟಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರೈತಸಂಘ ಹಾಗೂ ರೈತರು ಬೆಂಬಲ ನೀಡುತ್ತಿದ್ದು, ನಮ್ಮ ಒತ್ತಾಯಗಳನ್ನು ಕೂಡಲೇ ಈಡೇರಿಸದಿದ್ದರೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ರೈತರು ಹೋರಾಟ ಚಳುವಳಿಗೆ ಬೆಂಬಲಿಸಿ ಭಾಗವಹಿಸಬೇಕಾಗಿರುತ್ತದೆ ಎಂಬುದಾಗಿ ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ಆಲೂರುಸಿದ್ಧರಾಮಣ್ಣ, ಅರಳೀಕೆರೆತಿಪ್ಪೇಸ್ವಾಮಿ, ಈರಣ್ಣ, ದೊರೆಸ್ವಾಮಿ, ರಾಮಣ್ಣ, ಬಾಲಕೃಷ್ಣ, ರಾಮಕೃಷ್ಣ, ಬಿ. ಆರ್. ರಂಗಸ್ವಾಮಿ, ತಿಮ್ಮಯ್ಯ, ಲಕ್ಷ್ಮಣ, ತಿಪ್ಪೇಸ್ವಾಮಿ, ಶಶಿಧರ, ರವಿಕುಮಾರ್, ಮಂಜುನಾಥ್, ಕರಿಯಪ್ಪ, ರಾಮಣ್ಣ, ಗೋವಿಂದಪ್ಪ, ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.

