March 2, 2026
0001

ಹಿರಿಯೂರು:

ಮಾತೃಭಾಷೆ , ನೆಲದ ಭಾಷೆ, ಅನ್ನದ ಭಾಷೆ ಹಾಗೂ ಹೃದಯದ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಸುಂದರ ಲಿಪಿ ಹೊಂದಿರುವ  ಕನ್ನಡ ಭಾಷೆ ಉಳಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ  ಎಂಬುದಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ  ಸಿ.ಎಂ.ತಿಪ್ಪೇಸ್ವಾಮಿ ಅವರು  ಹೇಳಿದರು.

ತಾಲ್ಲೂಕಿನ ಜವನಗೊಂಡನಹಳ್ಳಿಯ  ಶ್ರೀಶಾರದಾ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ “ಕನ್ನಡಪ್ರಜ್ಞೆ” ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾದೇಶಿಕ  ಭಾಷೆಯಿಂದ ಮಾತ್ರ ಕಷ್ಟ ಸುಖ, ಸಂತೋಷ, ದುಃಖ, ದುಮ್ಮಾನ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರಲ್ಲೂ ಕನ್ನಡ ಪ್ರಜ್ಞೆ ಜಾಗೃತವಾಗಬೇಕು ಎಂಬುದಾಗಿ ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಫ್ರೊ| ಜಿ.ಶರಣಪ್ಪಅವರು ಮಾತನಾಡಿ ಕರ್ನಾಟಕದಲ್ಲಿ ಅನ್ಯ ಭಾಷೆಗಳನ್ನು ಒಪ್ಪಿಕೊಳ್ಳುವ ಸಂಸ್ಕೃತಿ, ಸಂಸ್ಕಾರದಿಂದ ವಿಶ್ವಕ್ಕೆ ಕರ್ನಾಟಕ  ಮಾದರಿ ರಾಜ್ಯವಾಗಿದೆ. ಕನ್ನಡ ಉಳಿಯಬೇಕಾದರೆ ನಾಡಿನ ನೆಲ, ಜಲ, ಸಂಪತ್ತಿನ ರಕ್ಷಣೆಗೆ ನಾವೆಲ್ಲರೂ ಹೋರಾಟ ಮಾಡಬೇಕು ಎಂಬುದಾಗಿ ಹೇಳಿದರು.

ಹೆಚ್.ಎಸ್. ಶಫೀವುಲ್ಲಾ  ವಿಶೇಷ ಉಪನ್ಯಾಸ ನೀಡಿ, ಕನ್ನಡ ನಾಡು ವೈಭವದ ಬೀಡು. ಇಲ್ಲಿ ಕವಿಗಳು, ಕಲಾವಿದರು, ಸಂತರು, ಶರಣರು ಜನ್ಮ ತಾಳಿದ್ದಾರೆ.   ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.  ಶಾಸ್ತ್ರೀಯ ಸ್ಥಾನಮಾನದ ಗೌರವ ಕೂಡ ದೊರೆತಿದೆ. ಎಂದರಲ್ಲದೆ,

ಆದಿಕವಿ  ಪಂಪನಿಂದ ಆಧುನಿಕ ಕವಿ ಹಂಪನಾವರೆಗೆ  ಕನ್ನಡ ನಾಡು-ನುಡಿ ಸಮೃದ‍್ಧವಾಗಿ ಬೆಳೆದಿದೆ. ಕನ್ನಡ ಭಾಷೆಯ  ಬೆಳವಣಿಗೆಗೆ ಸರ್ಕಾರ  ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಈಗಿನ ಮಕ್ಕಳಲ್ಲಿ,  ಯುವಕರಲ್ಲಿ, ಸಾರ್ವಜನಿಕರಲ್ಲಿ ಭಾಷಾಭಿಮಾನ ಬೆಳೆಸಬೇಕಾಗಿದೆ. ನಾಡಿನ  ಇತಿಹಾಸ ಉಳಿಸಲು ಎಲ್ಲರೂ ಶ್ರಮಿಸಬೇಕು  ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ  ಆರ್.ಟಿ.ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ,  ಮಾಜಿ ಅಧ್ಯಕ್ಷ , ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಹರ್ತಿಕೋಟೆ ಮಹಾಸ್ವಾಮಿ,  ನಿವೃತ್ತಶಿಕ್ಷಕ ಗುರುಮೂರ್ತಿ,  ತಾಲ್ಲೂಕು ಕ.ಸಾ.ಪ ವಿಶೇಷ ಪ್ರತಿನಿಧಿ ವೇದಪುಷ್ಪ, ಶಾಲಾ ಆಡಳಿತ ಮಂಡಳಿ  ಅಧ್ಯಕ್ಷರಾದ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ರಾಘವೇಂದ್ರ, ಮುಖ್ಯಶಿಕ್ಷಕರಾಕೇಶ್, ಕರಾಟೆ ತರಬೇತುದಾರ ರಂಗಸ್ವಾಮಿ, ಹರಳಪ್ಪ,  ಶಿಕ್ಷಕರಾದ ಗುರುಶಾಂತಮ್ಮ, ಶಾಹೀನಾ, ಶಕೀಲ್ ಅಹಮ್ಮದ್, ಅಮೂಲ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *