March 2, 2026
000005

ಹಿರಿಯೂರು :

ನಗರದ 3 ನೇ ವಾರ್ಡ್ ಚಂದ್ರಾ ಲೇ ಔಟ್ “ಡಾಗ್ ಸರ್ಕಲ್ “ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿನ್ನೆ ರಾತ್ರಿ ನಿರಂತರ ಸುರಿದ ಮಳೆಯಿಂದಾಗಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ರಸ್ತೆ ಸಂಪೂರ್ಣ ಹಾಳಾಗಿದೆ. ಈ ಭಾಗದ ನಾಗರೀಕರು ಕೆಸರುಗದ್ದೆ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡುವಂತಾಗಿದೆ ಎಂಬುದಾಗಿ ಚಂದ್ರಾ ಲೇಔಟ್ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ. ರಂಗನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ರಸ್ತೆ ಒತ್ತುವರಿ ತೆರವು ಮಾಡಿಸಿಕೊಡಲು ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶ, ಲೋಕಾಯುಕ್ತ ಆದೇಶ, ಜಿಲ್ಲಾಧಿಕಾರಿ  ಆದೇಶ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪತ್ರ, ಲೋಕೋಪಯೋಗಿ ಸಚಿವರ ಪತ್ರ, ಮುಖ್ಯಮಂತ್ರಿಗಳ ಪತ್ರ ಇದ್ದಾಗ್ಯೂ ಹಿರಿಯೂರು ನಗರಸಭೆ ಅಧಿಕಾರಿಗಳು ಯಾವುದೇ ಆದೇಶಕ್ಕೆ ಬೆಲೆ ಕೊಟ್ಟಿಲ್ಲ ಎಂಬುದು ಸತ್ಯ ಸಂಗತಿ ಎಂಬುದಾಗಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಗಂಭೀರ ಆರೋಪಿಸಿದ್ದಾರೆ.

ವೇದಾವತಿ  ನಗರದಲ್ಲಿ ಅನೇಕ ಹಾಲಿ ಇರುವ ಡಾಂಬಾರ್ ಮತ್ತು ಸಿ.ಸಿ.ರಸ್ತೆಗಳನ್ನು ಕಿತ್ತು ಡಾಂಬಾರ್ ರಸ್ತೆ ಮಾಡಿದ್ದಾರೆ. ಆದರೆ ಚಂದ್ರಾ ಲೇ ಔಟ್ ನಾಗರೀಕರ ಓಡಾಟಕ್ಕೆ ತಾತ್ಕಾಲಿಕವಾಗಿ ತಗ್ಗು ಗುಂಡಿಗಳಲ್ಲಿ ಮಣ್ಣು ಹಾಕಿಸುವಂತೆ ನಗರಸಭೆ ಎ.ಇ.ಇ ಶ್ರೀರಂಗಪ್ಪನವರಿಗೆ ಕಳೆದ 3 ತಿಂಗಳಿಂದ ಮನವಿ ಮಾಡುತ್ತ ಬಂದರು ಅವರು ನಮ್ಮ ಸಮಸ್ಯೆ ಇತ್ಯರ್ಥಕ್ಕೆ ಇಚ್ಛಾಶಕ್ತಿ ತೋರದೆ ಈ ಭಾಗದ ನಾಗರೀಕರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.

ಆದಕಾರಣ ಈ ಕೂಡಲೇ ನಗರಸಭೆ ಕಮಿಷನರ್ 3 ನೇ ವಾರ್ಡ್ ಚಂದ್ರಾ ಲೇ ಔಟ್ “ಡಾಗ್ ಸರ್ಕಲ್ ” ರಸ್ತೆಯ ಬಗ್ಗೆ ಗಮನ ಹರಿಸಿ ರಸ್ತೆ ಗುಂಡಿ ಮುಚ್ಚಿಸಿ, ಬಡಾವಣೆಯ ಜನರು ರಸ್ತೆಯಲ್ಲಿ ನೀರಾಳವಾಗಿ ಓಡಾಡಲು ಅನುವು ಮಾಡಿಕೊಡಬೇಕೆಂದು ಚಂದ್ರಲೇ ಔಟ್ ನಾಗರೀಕರ ಪರವಾಗಿ ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಮನವಿ  ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *