
ಹಿರಿಯೂರು:
ನಗರದ ಗಾಡಿ ಬಸಣ್ಣ ಬಡಾವಣೆಯಲ್ಲಿರುವ ಯಜ್ಞವಲ್ಕ್ಯ ಶಾಲೆಗೆ ಹೋಗುವ ದಾರಿಯು ಅತ್ಯಂತ ದುರವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡಲು ಆಗದಿರುವಂತಹ ಪರಿಸ್ಥಿತಿ ಉಂಟಾಗಿದೆ. ಮಳೆ ಬಂದು ಕೊಚ್ಚೆಯಂತಾಗಿರುವ ಈದಾರಿಯಲ್ಲಿ ಶಾಲಾ ಮಕ್ಕಳು ಓಡಾಡಲು ಆಗದೆ ತುಂಬಿ ಹರಿಯುತ್ತಿರುವ ಚಾಲನ್ ಕಿರುದಾರಿಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.

ಈ ಬಗ್ಗೆ ಹಲವಾರು ಬಾರಿ ನಗರಸಭೆಗೆ ಸಾರ್ವಜನಿಕರು ಹಾಗೂ ಆ ವಾರ್ಡ್ ನ ನಿವಾಸಿಗಳು ಮನವಿ ಮಾಡಿದರೂ ನಗರಸಭೆಯವರಾಗಲೀ, ಈ ವಾರ್ಡ್ ನ ನಗರಸಭಾ ಸದಸ್ಯರಾಗಲೀ ತಲೆ ಕೆಡಿಸಿಕೊಂಡಂತಿಲ್ಲವೆಂದು ಕರ್ನಾಟಕ ಹಿತರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಎನ್.ಬಸವರಾಜು ಆರೋಪಿಸಿದ್ದಾರೆ.

ಶಾಲಾ ಮಕ್ಕಳು ಚಾನಲ್ ಮೇಲೆ ಕಿರುದಾರಿಯಲ್ಲಿ ಬರುವಾಗ ಕಾಲು ಜಾರಿ ಬಿದ್ದರೆ ಅವರ ಪ್ರಾಣಾಪಾಯ ತಪ್ಪಿದ್ದಲ್ಲ. ಇಲ್ಲಿ ಮಳೆ ನೀರು ಹೋಗಲು ವ್ಯವಸ್ಥೆ ಇಲ್ಲದೆ ಮಳೆ ನೀರು ಮಣ್ಣಿನ ರಸ್ತೆಯಲ್ಲೇ ನಿಂತು ವಾಹನ ಸವಾರರು ಸಾರ್ವಜನಿಕರು, ಶಾಲಾ-ಮಕ್ಕಳು ಓಡಾಡಲು ಹರಸಾಹಸಪಡುತ್ತಿದ್ದಾರೆ. ನಿಂತನೀರಿನಲ್ಲಿ ವಾಹನಗಳು ಓಡಾಡುವುದರಿಂದ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಹಿರಿಯೂರು ನಗರಸಭೆಯ ಅಧಿಕಾರಿಗಳು ಮತ್ತು ವಾರ್ಡ್ ನ ನಗರಸಭಾ ಸದಸ್ಯರು ಕೂಡಲೇ ಈ ಬಗ್ಗೆ ಗಮನ ಹರಿಸಿ ರಸ್ತೆಯ ಸಮಸ್ಯೆ ಬಗೆಹರಿಸಿಕೊಡುವಂತೆ ಕರ್ನಾಟಕ ಹಿತರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಎನ್.ಬಸವರಾಜು ಅವರು ಈ ಮೂಲಕ ಒತ್ತಾಯಿಸಿದ್ದಾರೆ.

