
ಹಿರಿಯೂರು :
ಪ್ರತಿ ವರ್ಷದಂತೆ ಈ ವರ್ಷವು ನಡೆಯುವ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಸಾಹಿತ್ಯ, ಜಾನಪದ, ಸಂಗೀತ, ರಂಗಭೂಮಿ, ಸಮಾಜಸೇವೆ, ಶಿಕ್ಷಣ, ಪತ್ರಿಕಾ ಮಾಧ್ಯಮ, ಚಿತ್ರ/ಶಿಲ್ಪ ಕಲೆ, ಭರತನಾಟ್ಯ ಕ್ಷೇತ್ರಗಳಲ್ಲಿ ಕನ್ನಡನಾಡು, ನುಡಿ, ಸಂಸ್ಕೃತಿಯ ಬಗ್ಗೆ ಗಮನಾರ್ಹ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಗಮನಾರ್ಹಸೇವೆ ಮಾಡಿರುವವರು ತಮ್ಮ ಸೂಕ್ತ ದಾಖಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಹಿರಿಯೂರು ತಾಲ್ಲೂಕು ಇಲ್ಲಿಗೆ ಅಕ್ಟೋಬರ್ 29 ರ ಸಂಜೆ 5.30ರ ಒಳಗಾಗಿ ಸಲ್ಲಿಸಬೇಕು ಎಂಬುದಾಗಿ ಅವರು ಹೇಳಿದರು.
ಈಗಾಗಲೇ ತಾಲ್ಲೂಕು ಹಂತದಲ್ಲಿ ಸನ್ಮಾನಿತರಾದವರನ್ನು ಪರಿಗಣಿಸುವುದಿಲ್ಲ. ದಾಖಲೆಗಳನ್ನು ಸಲ್ಲಿಸುವಾಗ ಅವು ಕನ್ನಡ ನಾಡು, ನುಡಿ, ಸಂಸ್ಕೃತಿಯ ಸೇವೆಗೆ ಸಂಬಂಧಿಸಿರುವುದೇ ಆಗಿದ್ದಲ್ಲಿ ಮಾತ್ರ ಅಂತಹ ದಾಖಲೆಗಳನ್ನು ಪರಿಗಣಿಸಲಾಗುವುದು, ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಹಿರಿಯೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು,ಪತ್ರಕರ್ತರುಗಳು ಉಪಸ್ಥಿತರಿದ್ದರು.

